ADVERTISEMENT

ಸರಣಿ ಗೆದ್ದ ದಕ್ಷಿಣ ಆಫ್ರಿಕಾ

ಆಸೀಸ್‌ಗೆ ನಿರಾಸೆ; ಅಗ್ರಸ್ಥಾನ ಕಾಪಾಡಿಕೊಂಡ ಸ್ಮಿತ್ ಬಳಗ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಪರ್ತ್ (ಎಎಫ್‌ಪಿ): ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 309 ರನ್‌ಗಳ ಭಾರಿ ಗೆಲುವು ಪಡೆಯಿತು. ಈ ಮೂಲಕ ಸರಣಿಯನ್ನು 1-0 ರಲ್ಲಿ ತನ್ನದಾಗಿಸಿಕೊಂಡಿತಲ್ಲದೆ, ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡಿತು.

ವಾಕಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ನಾಲ್ಕೇ ದಿನಗಳಲ್ಲಿ ಕೊನೆಗೊಂಡಿತು. ಗೆಲುವಿಗೆ 632 ರನ್‌ಗಳ ಕಠಿಣ ಗುರಿ ಪಡೆದಿದ್ದ ಆಸ್ಟ್ರೇಲಿಯಾ ತನ್ನ ಎರಡನೇ ಇನಿಂಗ್ಸ್‌ನಲ್ಲಿ 82.5 ಓವರ್‌ಗಳಲ್ಲಿ 322 ರನ್‌ಗಳಿಗೆ ಆಲೌಟಾಯಿತು.

ರಿಕಿ ಪಾಂಟಿಂಗ್‌ಗೆ ಕೊನೆಯ ಟೆಸ್ಟ್‌ನಲ್ಲಿ ಗೆಲುವಿನ `ಉಡುಗೊರೆ' ನೀಡುವುದು ಮೈಕಲ್ ಕ್ಲಾರ್ಕ್ ಬಳಗದ ಉದ್ದೇಶವಾಗಿತ್ತು. ಆದರೆ ಗ್ರೇಮ್ ಸ್ಮಿತ್ ಬಳಗ ಅದಕ್ಕೆ ಅವಕಾಶ ನೀಡಲಿಲ್ಲ. ಡೇಲ್ ಸ್ಟೇನ್ (72ಕ್ಕೆ 3) ಮತ್ತು ರಾಬಿನ್ ಪೀಟರ್‌ಸನ್ (127ಕ್ಕೆ 3) ಒಳಗೊಂಡಂತೆ ಎಲ್ಲ ಬೌಲರ್‌ಗಳ ಪ್ರಭಾವಿ ದಾಳಿಯ ಮುಂದೆ ಆಸೀಸ್ ಬ್ಯಾಟ್ಸ್‌ಮನ್‌ಗಳು ಪರದಾಟ ನಡೆಸಿದರು.

ADVERTISEMENT

ಆತಿಥೇಯ ತಂಡ ವಿಕೆಟ್ ನಷ್ಟವಿಲ್ಲದೆ 40 ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿತ್ತು. ಆದರೆ ದಿನದ ಮೊದಲ ಓವರ್‌ನಲ್ಲೇ ಡೇವಿಡ್ ವಾರ್ನರ್ (29) ಔಟಾದರು. ಆ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು.

ತೆರೆಮರೆಗೆ ಸರಿದ ಪಾಂಟಿಂಗ್: ಡಾನ್ ಬ್ರಾಡ್ಮನ್ ಬಳಿಕ ಆಸೀಸ್ ಕಂಡಂತಹ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎನಿಸಿರುವ ರಿಕಿ ಪಾಂಟಿಂಗ್ ಈ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದರು. ಆದರೆ ತಮ್ಮ ಅಂತಿಮ ಟೆಸ್ಟ್‌ನ್ನು ಸ್ಮರಣೀಯವನ್ನಾಗಿಸಿಕೊಳ್ಳಲು ಅವರು ವಿಫಲರಾದರು.

ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ರನ್‌ಗಳಿಗೆ ಔಟಾಗಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲಿ ಎಂಟು ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ರಾಬಿನ್ ಪೀಟರ್‌ಸನ್ ಎಸೆತದಲ್ಲಿ ಜಾಕ್ ಕಾಲಿಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಪಾಂಟಿಂಗ್ ಕ್ರೀಸ್‌ಗೆ ಆಗಮಿಸುವ ಸಂದರ್ಭ ಎದುರಾಳಿ ತಂಡದ ಎಲ್ಲ ಆಟಗಾರರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಅದೇ ರೀತಿ ಔಟಾಗಿ ಪೆವಿಲಿಯನ್‌ಗೆ ಮರಳುವ ವೇಳೆ ಅವರಿಗೆ ಹಸ್ತಲಾಘವ ನೀಡಿದರು.

ಈ ಮೂಲಕ ಒಟ್ಟು 168 ಟೆಸ್ಟ್‌ಗಳಲ್ಲಿ 51.85ರ ಸರಾಸರಿಯಲ್ಲಿ 13,378 ರನ್ ಪೇರಿಸುವ ಮೂಲಕ ಪಾಂಟಿಂಗ್ ತೆರೆಮರೆಗೆ ಸರಿದರು. ಇದರಲ್ಲಿ 41 ಶತಕಗಳು ಒಳಗೊಂಡಿವೆ. ತಮ್ಮ ಕೊನೆಯ ಟೆಸ್ಟ್ ಸರಣಿಯಲ್ಲಿ 6.40ರ ಸರಾಸರಿಯಲ್ಲಿ 32 ರನ್‌ಗಳನ್ನು ಮಾತ್ರ ಗಳಿಸಿದರು.

`ಇಷ್ಟೊಂದು ಟೆಸ್ಟ್ ಪಂದ್ಯಗಳನ್ನಾಡಲು ಅವಕಾಶ ಲಭಿಸಿದ್ದು ನನ್ನ ಅದೃಷ್ಟ. ವೃತ್ತಿಜೀವನದ ಪ್ರತಿಯೊಂದು ಕ್ಷಣಗಳನ್ನೂ ಆನಂದಿಸಿದ್ದೇನೆ. ಒಂದಲ್ಲ ಒಂದು ದಿನ ವಿದಾಯ ಹೇಳುವುದು ಅನಿವಾರ್ಯ' ಎಂದು ಪಾಂಟಿಂಗ್ ನುಡಿದರು.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 225 ಮತ್ತು ಎರಡನೇ ಇನಿಂಗ್ಸ್ 111.5 ಓವರ್‌ಗಳಲ್ಲಿ 569. ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 163 ಮತ್ತು ಎರಡನೇ ಇನಿಂಗ್ಸ್ 82.5 ಓವರ್‌ಗಳಲ್ಲಿ 322 (ಎಡ್ ಕೋವನ್ 53, ಡೇವಿಡ್ ವಾರ್ನರ್ 29, ಶೇನ್ ವಾಟ್ಸನ್ 25, ರಿಕಿ ಪಾಂಟಿಂಗ್ 8, ಮೈಕಲ್ ಕ್ಲಾರ್ಕ್ 44, ಮಿಷೆಲ್ ಸ್ಟಾರ್ಕ್ ಔಟಾಗದೆ 68, ಡೇಲ್ ಸ್ಟೇನ್ 72ಕ್ಕೆ 3, ರಾಬಿನ್ ಪೀಟರ್‌ಸನ್ 127ಕ್ಕೆ 3, ವೆರ್ನಾನ್ ಫಿಲಾಂಡರ್ 41ಕ್ಕೆ 2, ಮಾರ್ನ್ ಮಾರ್ಕೆಲ್ 57ಕ್ಕೆ 2) ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 309 ರನ್ ಗೆಲುವು ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 1-0 ಜಯ; ಪಂದ್ಯಶ್ರೇಷ್ಠ: ಹಾಶಿಮ್ ಆಮ್ಲಾ, ಸರಣಿಶ್ರೇಷ್ಠ: ಮೈಕಲ್ ಕ್ಲಾರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.