ADVERTISEMENT

ಸರಣಿ ನಂತರ ಲಕ್ಷ್ಮಣ್ ವಿದಾಯ?

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ನವದೆಹಲಿ (ಪಿಟಿಐ): ಆಸ್ಟ್ರೇಲಿಯಾದಲ್ಲಿ ನೀರಸ ಆಟವಾಡಿರುವ ವಿ.ವಿ.ಎಸ್.ಲಕ್ಷ್ಮಣ್ ಸೇರಿದಂತೆ ಅನೇಕ ಹಿರಿಯ ಆಟಗಾರರು ವಿದಾಯ ಹೇಳಿ ಹೊರ ನಡೆಯಬೇಕು ಎನ್ನುವ ಕೂಗು ಬಲಗೊಂಡಿದೆ.

ಕಾಂಗರೂಗಳ ನಾಡಿನಲ್ಲಿ ಭಾರತಕ್ಕೆ ಹಿಂದೆ ಬಲವಾಗಿ ನಿಂತಿದ್ದ ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ವಿರುದ್ಧ ಕೆಂಡಾಮಂಡಲವಾಗಿರುವ ಮಾಜಿ ಕ್ರಿಕೆಟಿಗರು `ನಿವೃತ್ತಿ~ ಯೋಚನೆ ಮಾಡಲು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ ವಿದೇಶಿ ನೆಲದಲ್ಲಿ ಸತತ ಸೋಲಿನಿಂದ ಹಣ್ಣಾಗಿರುವ ನಾಯಕ ಮಹೇಂದ್ರ ಸಿಂಗ್ ದೋನಿ `ತಲೆದಂಡ~ಕ್ಕೂ ಒತ್ತಡ ಹೆಚ್ಚಿದೆ. `ಇನ್ನು ನಾಯಕತ್ವದಲ್ಲಿ ಇರುವುದು ಬೇಡ~ ಎಂದು ಧ್ವನಿ ಎತ್ತಲಾಗಿದೆ.

ಬಹು ಹಿಂದೆಯೇ ವಿದಾಯ ಹೇಳಬೇಕಾಗಿದ್ದ ಕೆಲವು ಆಟಗಾರರು ಇನ್ನೂ ತಂಡದಲ್ಲಿದ್ದಾರೆ. ಆದರೆ ಸಿಕ್ಕ ಹೆಚ್ಚುವರಿ ಅವಕಾಶದಲ್ಲಿ ತಕ್ಕ ಪ್ರದರ್ಶನ ನೀಡಲು ಮಾತ್ರ ಅವರಿಂದ ಸಾಧ್ಯವಾಗುತ್ತಿಲ್ಲ ಎನ್ನುವುದು ದೂರು. ಇಂಥ ಟೀಕಾಸ್ತ್ರಗಳ ಪ್ರಹಾರವು ದ್ರಾವಿಡ್ ಅವರಿಗಿಂತ ಲಕ್ಷ್ಮಣ್ ಮೇಲೆ ನಡೆದಿದೆ. ಆಸೀಸ್ ನೆಲದಲ್ಲಿ ಗಟ್ಟಿಯಾಗಿ ನಿಂತು ಆಡುವಂಥ ಬ್ಯಾಟ್ಸ್‌ಮನ್ ಎನ್ನುವ ಖ್ಯಾತಿಯನ್ನು ಲಕ್ಷ್ಮಣ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಹಿಂದೆ ಅನೇಕ ಬಾರಿ ಆಸ್ಟ್ರೇಲಿಯಾದಲ್ಲಿ `ವೆರಿ ವೆರಿ ಸ್ಪೇಷಲ್~ ಎನಿಸಿಕೊಂಡ `ವಿವಿಎಸ್~ ಈ ಬಾರಿಯ ಪ್ರವಾಸದಲ್ಲಿ ನಿರಾಸೆಗೊಳಿಸಿದ್ದೇ ಹೆಚ್ಚು. ಮೊದಲ ಮೂರು ಟೆಸ್ಟ್‌ಗಳ ಆರು ಇನಿಂಗ್ಸ್‌ಗಳಲ್ಲಿ ಗಳಿಸಿದ್ದು ಒಟ್ಟು 102 (2, 1, 2, 66, 31, 0) ರನ್ ಮಾತ್ರ. ಈ ವಿಷಯದಲ್ಲಿ ದ್ರಾವಿಡ್ ಸ್ವಲ್ಪ ಒಳಿತು ಎಂದೇ ಹೇಳಬೇಕು. ಅವರ ಬ್ಯಾಟಿಂಗ್‌ನಿಂದ 153 ರನ್‌ಗಳು ಹರಿದು ಬಂದಿವೆ. ಮೊದಲ ಎರಡು ಟೆಸ್ಟ್‌ನ ನಾಲ್ಕು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 68, 10, 5, 29 ರನ್ ಗಳಿಸಿದ್ದರು. ಆದರೆ ಪರ್ತ್‌ನಲ್ಲಿ ಮೊದಲು 9 ರನ್‌ಗೆ ಎಡವಿದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಚೇತರಿಸಿಕೊಂಡು 32 ರನ್ ಗಳಿಸಿ ಆಡುತ್ತಿದ್ದಾರೆ.

ಇದೆಲ್ಲವನ್ನು ಗಮನಿಸಿಯೇ ಮಾಜಿಗಳು ನಾಲಿಗೆಗೆ ವ್ಯಾಯಾಮ ಸಿಗುವಷ್ಟು ಮಾತನಾಡುತ್ತಿದ್ದಾರೆ. ಅವರ ಕಣ್ಣು ಇರುವುದು ಲಕ್ಷ್ಮಣ್ ಹಾಗೂ ದ್ರಾವಿಡ್ ಮೇಲೆ. ಅಷ್ಟೇ ಅಲ್ಲ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧವೂ ಮಾತುಗಳ ಬಾಣ ಬಿಟ್ಟಿದ್ದಾರೆ. `ವಿದೇಶದಲ್ಲಿ ಪಂದ್ಯಗಳನ್ನು ಗೆಲ್ಲುವಂಥ ಸಾಮರ್ಥ್ಯವುಳ್ಳ ಆಟಗಾರರು ಇರುವ ತಂಡವನ್ನು ರಚಿಸದ ಬಿಸಿಸಿಐ ಕೇವಲ ಹಣ ಮಾಡುವತ್ತ ಗಮನ ಕೇಂದ್ರೀಕರಿಸಿದೆ~ ಎಂದು ಕಪಿಲ್ ದೇವ್   ದೂರಿದ್ದಾರೆ.

`ನಾಯಕರಾಗಿ ದೋನಿ ಹೀಗೆಯೇ ನಿರಾಸೆಗೊಳಿಸುತ್ತಾ ಸಾಗಿದರೆ ಆಟದ ಕಡೆಗಿನ ಆಸಕ್ತಿಯೇ ಕಡಿಮೆ ಆಗುತ್ತದೆ~ ಎಂದಿರುವ ಅವರು ಸ್ವದೇಶದಲ್ಲಿನ ಯಶಸ್ಸಿನಿಂದ ಅಭಿಮಾನಿಗಳನ್ನು ತೃಪ್ತಿಪಡಿಸಲು ಸಾಧ್ಯವಾಗದು ಎಂದಿದ್ದಾರೆ.
ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಂತೂ `ಅನುಭವಿ ಆಟಗಾರರು ನಿವೃತ್ತಿ ಹೊಂದಲು ಸೂಕ್ತ ಕಾಲ~ ಎನ್ನುವ ಮಂತ್ರ ಪಠಣ ಮುಂದುವರಿಸಿದ್ದಾರೆ. ಹಿರಿಯರೇ ಹೀಗೆ ಆಡುತ್ತಿರುವಾಗ ಹೊಸಬರಿಗೆ ಅವಕಾಶ ಕೊಟ್ಟು ನೋಡುವುದು ಒಳಿತು ಎನ್ನುವುದು ಅವರ ಅಭಿಪ್ರಾಯ.

ಆದರೆ ಸೌರವ್ ಗಂಗೂಲಿ ಮಾತ್ರ ಬೇರೆ ರೀತಿಯಲ್ಲಿಯೇ ಯೋಚಿಸುತ್ತಾರೆ. `ರಾಹುಲ್ ಹಾಗೂ ಲಕ್ಷ್ಮಣ್ ಅವರು ದಶಕದ ಹಿಂದೆ ಈಡನ್ ಗಾರ್ಡನ್ಸ್‌ನಲ್ಲಿ ತೋರಿದ್ದ ಪ್ರದರ್ಶನವನ್ನು ಮತ್ತೆ ಮತ್ತೆ ನಿರೀಕ್ಷೆ ಮಾಡಲು ಆಗದು. ಅವರು ಸ್ವದೇಶದಲ್ಲಿ ರನ್ ಗಳಿಸಲು ಈಗಲೂ ಸಮರ್ಥರು. ಆದ್ದರಿಂದ ಈಗಲೇ ಹೋಗಿ ಎಂದು ಹೇಳುವ ಅಗತ್ಯವಿಲ್ಲ. ಹೇಗೆಂದರೂ 2013ರವರೆಗೆ ವಿದೇಶದಲ್ಲಿ ಟೆಸ್ಟ್ ಆಡುವುದಿಲ್ಲ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.