ADVERTISEMENT

ಸರ್ದಾರ್, ಇಗ್ನೇಸ್ ಕಣಕ್ಕಿಳಿಯುವ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 25 ಜುಲೈ 2012, 19:30 IST
Last Updated 25 ಜುಲೈ 2012, 19:30 IST
ಸರ್ದಾರ್, ಇಗ್ನೇಸ್ ಕಣಕ್ಕಿಳಿಯುವ ವಿಶ್ವಾಸ
ಸರ್ದಾರ್, ಇಗ್ನೇಸ್ ಕಣಕ್ಕಿಳಿಯುವ ವಿಶ್ವಾಸ   

ಲಂಡನ್ (ಪಿಟಿಐ): `ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮಿಡ್‌ಫೀಲ್ಡರ್ ಸರ್ದಾರ್ ಸಿಂಗ್ ಹಾಗೂ ಇಗ್ನೇಸ್ ಟರ್ಕಿ ಅವರು ಒಲಿಂಪಿಕ್ಸ್‌ನ ಮೊದಲ ಹಾಕಿ ಪಂದ್ಯದಲ್ಲಿ ಕಣಕ್ಕಿಳಿಯುವ ವಿಶ್ವಾಸವಿದೆ. ಅದಕ್ಕಾಗಿ ಅವರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ~ ಎಂದು ಭಾರತ ಹಾಕಿ ತಂಡದ ಕೋಚ್ ಮೈಕಲ್ ನಾಬ್ಸ್ ತಿಳಿಸಿದ್ದಾರೆ.

ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡಿರುವ ಆಟಗಾರರು ಅಭ್ಯಾಸದತ್ತ ಗಮನ ಹರಿಸುತ್ತಿದ್ದಾರೆ. ಗಾಯಗೊಂಡಿದ್ದ ಕಾರಣ ಯೂರೊಪ್ ಹಾಗೂ ಸ್ಪೇನ್ ಪ್ರವಾಸದಲ್ಲಿ ಸರ್ದಾರ್ ಒಂದೂ ಪಂದ್ಯದಲ್ಲಿ ಆಡಿರಲಿಲ್ಲ.

ಕೆಲ ದಿನಗಳ ಹಿಂದೆ ಲಂಡನ್‌ಗೆ ಬಂದಿರುವ ಹಾಕಿ ತಂಡ ಒಲಿಂಪಿಕ್ ಅರೆನಾದಲ್ಲಿರುವ ಹಾಕಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದೆ. ಸ್ಪೇನ್ ಪ್ರವಾಸದ ವೇಳೆ ಇಗ್ನೇಸ್ ಅವರಿಗೆ ಹಿಮ್ಮಡಿಯ ಭಾಗದಲ್ಲಿ ಕಾಲು ಉಳುಕಿತ್ತು.

`ಚಿಂತಿಸಬೇಕಾದ ಅಗತ್ಯವಿಲ್ಲ. ಇಬ್ಬರೂ ಆಟಗಾರರು ಸಜ್ಜುಗೊಳ್ಳುತ್ತಿದ್ದಾರೆ. ಹಾಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ~ ಎಂದು ನಾಬ್ಸ್ ನುಡಿದರು.

`ಭಾರತ ನಿಖರವಾಗಿ ಹೀಗೆಯೇ ಪ್ರದರ್ಶನ ನೀಡಬೇಕು ಎಂದು ನಿರೀಕ್ಷೆ ಮಾಡುವುದಿಲ್ಲ. ಆದರೆ, ಉತ್ತಮ ಆಟವಾಡಲಿದೆ ಎನ್ನುವ ವಿಶ್ವಾಸವಿದೆ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಜರ್ಮನಿ ತಂಡಗಳಿಂದ ಪ್ರಬಲ ಸವಾಲು ಎದುರಾಗಲಿದೆ. ಈ ಸವಾಲನ್ನು ಎದುರಿಸಲು ಭಾರತ ಉತ್ತಮವಾಗಿ ಸಜ್ಜುಗೊಂಡಿದೆ. ನಮ್ಮ ಆಟಗಾರರಿಗೆ ಅವರ ಜವಾಬ್ದಾರಿ ತಿಳಿದಿದೆ. ಅದನ್ನು ನಿಭಾಯಿಸುತ್ತಾರೆ~ ಎಂದು ನಾಬ್ಸ್ ಹೇಳಿದರು.

ಇಗ್ನೇಸ್ ಹಾಗೂ `ಪೆನಾಲ್ಟಿ  ಕಾರ್ನರ್~ ಪರಿಣಿತ ಸಂದೀಪ್ ಸಿಂಗ್ ಅವರು ಭಾರತ ತಂಡದಲ್ಲಿರುವ ಅನುಭವಿ ಆಟಗಾರರು. ಇವರು 2004ರ ಥೆನ್ಸ್ ಒಲಿಂಪಿಕ್ಸ್‌ನಲ್ಲಿ ತಂಡದಲ್ಲಿದ್ದರು.

ಒಲಿಂಪಿಕ್ಸ್‌ನಲ್ಲಿ ಎಂಟು ಸಲ ಚಿನ್ನದ ಪದಕ ಗೆದ್ದ ಇತಿಹಾಸ ಹೊಂದಿರುವ ಭಾರತ 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಾಗದೇ ಪರದಾಡಿತ್ತು. ನೀಲಿ ಟರ್ಫ್‌ನಲ್ಲಿ ಭಾರತ ಬುಧವಾರ ಕೂಡ ಅಭ್ಯಾಸ ನಡೆಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.