ADVERTISEMENT

ಸರ್ವಿಸಸ್‌, ರೈಲ್ವೆ ತಂಡ ಚಾಂಪಿಯನ್

ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಕರ್ನಾಟಕದ ನವನೀತಾ ‘ಅತ್ಯುತ್ತಮ ಆಟಗಾರ್ತಿ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 19:40 IST
Last Updated 16 ಜನವರಿ 2016, 19:40 IST
ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದ ರೈಲ್ವೆ ತಂಡದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು. ನಿಂತವರು (ಎಡದಿ ಂದ): ಪಿ. ಅನಿತಾ, ಆರ್‌. ಅಲಗು, ಸೀತಾಮಣಿ, ರಂಜನ್‌ (ಮ್ಯಾನೇಜರ್‌), ಅಪರ್ಣಾ ಘೋಷ್‌ (ಕೋಚ್‌), ಪ್ರಸನ್ನ ಜೈ ಶಂಕರ್‌ (ಸಹಾಯಕ ಕೋಚ್), ಮುರಳೀನಾಥ್‌, ಎನ್‌. ರಾಧಾ, ಪಿ.ಯು. ನವನೀತಾ, ಎಂ. ಗಾಯತ್ರಿ. ಕುಳಿತವರು: ಕೆ. ಪ್ರೀತಿ, ಆರ್‌. ಪ್ರಿಯಾದರ್ಶಿನಿ, ಕಮಲೇಶ್‌, ಸೀಮಾಸಿಂಗ್‌, ಪ್ರವೀಣ್‌ ಮೆನನ್‌  -ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌
ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದ ರೈಲ್ವೆ ತಂಡದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು. ನಿಂತವರು (ಎಡದಿ ಂದ): ಪಿ. ಅನಿತಾ, ಆರ್‌. ಅಲಗು, ಸೀತಾಮಣಿ, ರಂಜನ್‌ (ಮ್ಯಾನೇಜರ್‌), ಅಪರ್ಣಾ ಘೋಷ್‌ (ಕೋಚ್‌), ಪ್ರಸನ್ನ ಜೈ ಶಂಕರ್‌ (ಸಹಾಯಕ ಕೋಚ್), ಮುರಳೀನಾಥ್‌, ಎನ್‌. ರಾಧಾ, ಪಿ.ಯು. ನವನೀತಾ, ಎಂ. ಗಾಯತ್ರಿ. ಕುಳಿತವರು: ಕೆ. ಪ್ರೀತಿ, ಆರ್‌. ಪ್ರಿಯಾದರ್ಶಿನಿ, ಕಮಲೇಶ್‌, ಸೀಮಾಸಿಂಗ್‌, ಪ್ರವೀಣ್‌ ಮೆನನ್‌ -ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌   

ಮೈಸೂರು: ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಸೇರಿದ್ದ ಕ್ರೀಡಾಭಿಮಾನಿಗಳ ಬೆಂಬಲವೆಲ್ಲಾ ಸರ್ವಿಸಸ್‌ ತಂಡಕ್ಕೆ. ಆ ಬೆಂಬಲದಿಂದ ಸ್ಫೂರ್ತಿ ಪಡೆದು ಅಮೋಘ ಪ್ರದರ್ಶನ ತೋರಿದ ಸರ್ವೀಸಸ್‌ ತಂಡದವರು 9 ವರ್ಷಗಳ ಬಳಿಕ ರಾಷ್ಟ್ರೀಯ ಚಾಂಪಿಯನ್‌ ಆದರು.

ರಾಷ್ಟ್ರೀಯ ತಂಡದ ನಾಯಕ ವಿಶೇಷ್‌ ಭೃಗುವಂಶಿ ಸೇರಿದಂತೆ ಪ್ರಮುಖ ಆಟಗಾರರನ್ನು ಒಳಗೊಂಡ ಕಳೆದ ಬಾರಿಯ ಚಾಂಪಿಯನ್‌ ಉತ್ತರಾ ಖಂಡಕ್ಕೆ ದೊಡ್ಡ ಆಘಾತ ಎದುರಾಯಿತು.

66ನೇ ರಾಷ್ಟ್ರೀಯ ಸೀನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಫೈನಲ್‌ನಲ್ಲಿ ಸರ್ವಿಸಸ್‌ ತಂಡದವರು 73–67 ಪಾಯಿಂಟ್‌ಗಳಿಂದ ಉತ್ತರಾಖಂಡ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದರು. ಜತೆಗೆ ₹ 1 ಲಕ್ಷ ಮೊತ್ತ ಜೇಬಿಗಿಳಿಸಿದರು.

ವಿರಾಮದ ವೇಳೆಗೆ 40–31 ಪಾಯಿಂಟ್‌ ಗಳಿಂದ ಮುಂದಿದ್ದ ವಿಜಯಿ ತಂಡದವರ ಗೆಲುವಿಗೆ ಪ್ರಮುಖ ಕಾರಣ ಜೋಗಿಂದರ್‌ ಸಿಂಗ್‌ (29 ಪಾಯಿಂಟ್‌), ನರೇಂದರ್‌ ಸಿಂಗ್‌ (15 ಪಾಯಿಂಟ್‌).

ಮೊದಲ ಕ್ವಾರ್ಟರ್‌ನಲ್ಲಿ ಹಿನ್ನಡೆ ಕಂಡ ಸರ್ವಿಸಸ್‌ ತಂಡದವರು ನಂತರದ ಅವಧಿಯಲ್ಲಿ ಅತ್ಯುತ್ತಮ ಗುರಿ ಎಸೆತದ ಮೂಲಕ ಪಾಯಿಂಟ್‌ ಕಲೆಹಾಕಿದರು. ಅದರಲ್ಲೂ ಜೋಗಿಂದರ್‌ ಹಾಗೂ ನರೇಂದರ್‌ ಅವರನ್ನು ನಿಯಂತ್ರಿಸಲು ಎದುರಾಳಿಗೆ ಸಾಧ್ಯವೇ ಆಗಲಿಲ್ಲ. ಎದುರಾಳಿಯ ರಕ್ಷಣಾ ಆಟಗಾರರನ್ನು ತಪ್ಪಿಸಿ ಬ್ಯಾಸ್ಕೆಟ್‌ಗೆ ಚೆಂಡನ್ನು ಹಾಕುತ್ತಾ ತಂಡದ ಪಾಯಿಂಟ್‌ ಹೆಚ್ಚಿಸಿದರು. ಅತ್ಯುತ್ತಮ ಪಾಸ್‌ಗಳ ಮೂಲಕ ಜೋರು ಚಪ್ಪಾಳೆ ಗಿಟ್ಟಿಸಿದರು.

ಉತ್ತರಾಖಂಡ ತಂಡದ ಮುರಳಿ ಕೃಷ್ಣ (24 ಪಾಯಿಂಟ್‌) ಹಾಗೂ ವಿಶೇಷ್‌ ಭೃಗುವಂಶಿ (20 ಪಾಯಿಂಟ್‌) ನಡೆಸಿದ ಪ್ರಯತ್ನ ಸಾಕಾಗಲಿಲ್ಲ. ಕೊನೆಯ ಕ್ವಾರ್ಟರ್‌ ರೋಚಕ ಪೈಪೋಟಿಗೆ ಕಾರಣವಾಯಿತು.

ಮನ ಗೆದ್ದ ರೈಲ್ವೆ ವನಿತೆಯರು: ಸೊಗಸಾದ ಪ್ರದರ್ಶನದ ಮೂಲಕ ಫೈನಲ್‌ ತಲುಪಿದ್ದ ಕೇರಳಕ್ಕೆ ಆಘಾತ ನೀಡಿದ್ದು ರೈಲ್ವೆ ಬಳಗ. ಅಂತಿಮ ಘಟ್ಟದಲ್ಲಿ ತೋರಿದ ಚಾಣಾಕ್ಷ ಆಟ ರೈಲ್ವೆ ತಂಡವನ್ನು ಚಾಂಪಿಯನ್‌ ಆಗಿಸಿತು. ಅಲ್ಲದೆ, ₹ 1 ಲಕ್ಷ ಬಹುಮಾನ ಲಭಿಸಿತು.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ರೈಲ್ವೆ ತಂಡದವರು 72–55 ಪಾಯಿಂಟ್‌ಗಳಿಂದ ಕೇರಳ ತಂಡವನ್ನು ಪರಾಭವಗೊಳಿಸಿದರು.

ವಿಜಯಿ ತಂಡದವರು ಮೊದಲ ಕ್ವಾರ್ಟರ್‌ನಲ್ಲಿ ಹಿನ್ನಡೆ ಕಂಡಿದ್ದರು. ಆದರೆ, ನಂತರದ ಕ್ವಾರ್ಟರ್‌ಗಳಲ್ಲಿ ಎದುರಾಳಿಯ ರಕ್ಷಣಾ ಕೋಟೆಯನ್ನು ಸೀಳಿ ಚೆಂಡನ್ನು ಬ್ಯಾಸ್ಕೆಟ್‌ ಮಾಡುವಲ್ಲಿ ಸಫಲರಾದರು. ಈ ತಂಡದ ಅನಿತಾ 16 ಪಾಯಿಂಟ್‌ ಕಲೆಹಾಕಿದರು.

ಪುರುಷರ ವಿಭಾಗದಲ್ಲಿ ಆತಿಥೇಯ ಕರ್ನಾಟಕ ತಂಡದವರು ಐದನೇ ಸ್ಥಾನ ಪಡೆದರು. ಈ ತಂಡದವರು 93–86 ಪಾಯಿಂಟ್‌ಗಳಿಂದ ರೈಲ್ವೆ ತಂಡವನ್ನು ಸೋಲಿಸಿದರು.  ರೈಲ್ವೆ ತಂಡವನ್ನು ಪ್ರತಿನಿಧಿಸುವ ಕೊಡಗಿನ ಪಿ.ಯು. ನವನೀತಾ ಅವರು ಚಾಂಪಿಯನ್‌ಷಿಪ್‌ನ ‘ಅತ್ಯುತ್ತಮ ಆಟಗಾರ್ತಿ’ ಪುರಸ್ಕಾರಕ್ಕೆ ಭಾಜನರಾದರು. ಜತೆಗೆ ₹ 10 ಸಾವಿರ ಬಹುಮಾನ ಪಡೆದರು.

‘2015ರವರೆಗೆ ಕರ್ನಾಟಕ ತಂಡ ಪ್ರತಿನಿಧಿಸುತ್ತಿದ್ದೆ. ಈ ಬಾರಿ  ಉದ್ಯೋಗ ಲಭಿಸಿದ್ದರಿಂದ ರೈಲ್ವೆ ತಂಡದ ಪರ ಆಡುತ್ತಿದ್ದೇನೆ. ತಂಡ ಚಾಂಪಿಯನ್‌ ಆಗಿದ್ದು ನನ್ನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪುರುಷರ ವಿಭಾಗದ ‘ಅತ್ಯುತ್ತಮ ಆಟಗಾರ’ ಪ್ರಶಸ್ತಿ ಸರ್ವಿಸಸ್‌ ತಂಡದ ಜೋಗಿಂದರ್‌ ಸಿಂಗ್‌ ಪಾಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.