ADVERTISEMENT

ಸವಾಲಿಗೆ ಸನ್‌ರೈಸರ್ಸ್‌ ಸಿದ್ಧ

ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಟೂರ್ನಿ: ಇಂದಿನಿಂದ ಅರ್ಹತಾ ಹಂತದ ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಮೊಹಾಲಿ (ಪಿಟಿಐ): ದೇಶದ ಕ್ರಿಕೆಟ್‌ ಪ್ರೇಮಿಗಳಿಗೆ ಮತ್ತೆ ‘ಚುಟುಕು ಕ್ರಿಕೆಟ್‌’ನ ಸವಿ ಅನುಭವಿಸಲು ಅವಕಾಶ ದೊರೆತಿದೆ. ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಅರ್ಹತಾ ಹಂತದ ಪಂದ್ಯಗಳಿಗೆ ಮಂಗಳವಾರ ಚಾಲನೆ ಲಭಿ­ಸ­ಲಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಫೈಸಲಾಬಾದ್‌ ವೂಲ್ವ್ಸ್‌ ತಂಡ ನ್ಯೂಜಿಲೆಂಡ್‌ನ ಒಟಾಗೊ ವೋಲ್ಟ್ಸ್ ವಿರುದ್ಧ ಪೈಪೋಟಿ ನಡೆಸಲಿದೆ. ದಿನದ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಶ್ರೀಲಂಕಾದ ಕಂದುರತಾ ಮರೂನ್ಸ್‌ ಪರಸ್ಪರ ಎದುರಾಗಲಿವೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಯಶಸ್ಸಿನ ಕಾರಣ ಹುಟ್ಟಿದ ಚಾಂಪಿಯಲ್ಸ್‌ ಲೀಗ್‌ ಟೂರ್ನಿ ಇದೀಗ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಆದರೆ ಐಪಿಎಲ್‌ನಂತೆ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಈ ಟೂರ್ನಿ ವಿಫಲವಾಗಿದೆ. 2012ರ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಈ ಬಾರಿ ಭಾರತದಲ್ಲಿ ನಡೆಯುವ ಕಾರಣ ಟೂರ್ನಿ ಯಶಸ್ಸು ಗಳಿಸಬಹುದು ಎಂಬ ವಿಶ್ವಾಸದಲ್ಲಿ ಬಿಸಿಸಿಐ ಇದೆ

ಅರ್ಹತಾ ಹಂತದ ಎಲ್ಲ  ಪಂದ್ಯಗಳು ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣ­ದಲ್ಲಿ ನಡೆಯಲಿವೆ. ಅರ್ಹತಾ ಹಂತದಿಂದ ಎರಡು ತಂಡಗಳು ಪ್ರಧಾನ ಹಂತದಲ್ಲಿ ಆಡಲು ಅವಕಾಶ ಪಡೆಯಲಿವೆ. ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌, ರಾಜಸ್ತಾನ ರಾಯಲ್ಸ್‌, ಹೈವೆಲ್ಡ್‌ ಲಯನ್ಸ್‌, ಟೈಟಾನ್ಸ್‌, ಟ್ರಿನಿಡಾಡ್‌ ಅಂಡ್‌ ಟೊಬಾಗೊ, ಪರ್ತ್‌ ಸ್ಕಾಚರ್ಸ್‌ ಮತ್ತು ಬ್ರಿಸ್ಬೇನ್‌ ಹೀಟ್ಸ್ ತಂಡಗಳು ಟೂರ್ನಿಗೆ ನೇರ ಅರ್ಹತೆ ಪಡೆದುಕೊಂಡಿವೆ.

ಶಿಖರ್‌ ಧವನ್‌ ಬಲ: ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ದೆಹಲಿಯ ಶಿಖರ್‌ ಧವನ್‌ ಮುನ್ನಡೆಸುತ್ತಿದ್ದಾರೆ. ಈ ತಂಡ ಪ್ರಮುಖ ಆಟಗಾರರನ್ನು ಒಳಗೊಂಡಿದೆಯಾದರೂ, ಬ್ಯಾಟಿಂಗ್‌­ನಲ್ಲಿ ಧವನ್‌ ಅವರನ್ನೇ ನೆಚ್ಚಿಕೊಂಡಿದೆ. ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಎನಿಸಿಕೊಂಡಿದ್ದ ಧವನ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

ಪಾರ್ಥಿವ್‌ ಪಟೇಲ್‌, ಜೆಪಿ ಡುಮಿನಿ ಮತ್ತು ಡರೆನ್‌ ಸಮಿ ಅವರೂ ಈ ತಂಡದಲ್ಲಿದ್ದು, ಬ್ಯಾಟಿಂಗ್‌ ಕ್ರಮಾಂಕ ಬಲಿಷ್ಠವಾಗಿದೆ. ಡೆಲ್‌ ಸ್ಟೇನ್‌ ಮತ್ತು ಇಶಾಂತ್‌ ಶರ್ಮ ಈ ತಂಡದ ಪ್ರಮುಖ ಬೌಲರ್‌ಗಳು. ‘ನಾಯಕತ್ವ ಹೊಸ ಸವಾಲು. ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ’ ಎಂದು ಧವನ್‌ ತಿಳಿಸಿದ್ದಾರೆ.

ಲಾಹಿರು ತಿರಿಮನ್ನೆ ನೇತೃತ್ವದ ಕಂದುರತಾ ಮರೂನ್ಸ್‌ ಕೂಡಾ ಆತ್ಮವಿಶ್ವಾಸದಲ್ಲಿದೆ. ಅಂತರರಾಷ್ಟ್ರೀಯ ಆಟಗಾರರಾದ ಕುಮಾರ ಸಂಗಕ್ಕಾರ, ಅಜಂತಾ ಮೆಂಡಿಸ್‌, ನುವಾನ್‌ ಕುಲ­ಶೇಖರ ಅವರು ಈ ತಂಡದಲ್ಲಿದ್ದಾರೆ. ‘ನಮ್ಮದು ಯುವ ತಂಡ. ಆದರೆ ಅನುಭವಿ ಆಟಗಾರರೂ ಇದ್ದಾರೆ. ಈ ಕಾರಣ ತಂಡ ಸಮತೋಲನದಿಂದ ಕೂಡಿದೆ’ ಎಂದು ತಿರಿಮನ್ನೆ ಹೇಳಿದ್ದಾರೆ.

ವೂಲ್ವ್ಸ್‌– ಒಟಾಗೊ ಸೆಣಸು: ದಿನದ ಮೊದಲ ಪಂದ್ಯದಲ್ಲಿ ಮಿಸ್ಬಾ ಉಲ್‌ ಹಕ್‌ ನೇತೃತ್ವದ ಫೈಸಲಾಬಾದ್‌ ವೂಲ್ವ್ಸ್‌ ನ್ಯೂಜಿಲೆಂಡ್‌ನ ಒಟಾಗೊ ವೋಲ್ಟ್ಸ್‌ ವಿರುದ್ಧ ಪೈಪೋಟಿ ನಡೆಸಲಿದೆ.

ವೀಸಾ ಸಮಸ್ಯೆಯ ಕಾರಣ ಫೈಸಲಾಬಾದ್‌ ತಂಡದ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ವೀಸಾ ದೊರೆತ ಕಾರಣ ಆಡುವ ಅವಕಾಶ ಪಡೆದುಕೊಂಡಿದೆ.

ಮಿಸ್ಬಾ ಮತ್ತು ಸಯೀದ್‌ ಅಜ್ಮಲ್‌ ಅವರನ್ನು ಹೊರತುಪಡಿಸಿದರೆ ಈ ತಂಡ ಯುವ ಆಟಗಾರರಿಂದಲೇ ಕೂಡಿದೆ. ‘ಈ ಪ್ರಮುಖ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನಮ್ಮದು’ ಎಂದು ತಂಡದ ಉಪನಾಯಕ ಮುಹಮ್ಮದ್‌ ಸಲ್ಮಾನ್‌ ನುಡಿದಿದ್ದಾರೆ.
ನ್ಯೂಜಿಲೆಂಡ್‌ನ ವೋಲ್ಟ್ಸ್‌ ತಂಡ ಬ್ರೆಂಡನ್‌ ಮೆಕ್ಲಮ್‌ ಅವರನ್ನು ನೆಚ್ಚಿಕೊಂಡಿದೆ. ಈ ತಂಡ 2009 ರ ಟೂರ್ನಿಯ ಅರ್ಹತಾ ಹಂತದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿ ಹೊರಬಿದ್ದಿತ್ತು. ಈ ಬಾರಿ ಪ್ರಧಾನ ಹಂತ ಪ್ರವೇಶಿಸುವ ವಿಶ್ವಾಸದಲ್ಲಿದೆ.

ತಂಡಗಳು ಇಂತಿವೆ
ಫೈಸಲಾಬಾದ್‌ ವೂಲ್ವ್ಸ್‌

ಮಿಸ್ಬಾ ಉಲ್‌ ಹಕ್‌ (ನಾಯಕ), ಆಸಿಫ್‌ ಅಲಿ, ಅಲಿ ವಖಾಸ್‌, ಖುರ್ರಮ್‌ ಶಹಜಾದ್‌, ಮುಹಮ್ಮದ್‌ ಸಲ್ಮಾನ್‌, ವಖಾಸ್‌ ಮಕ್ಸೂದ್‌, ಸಮೀವುಲ್ಲಾ ನಿಯಾಜಿ, ಅಸದ್‌ ಅಲಿ, ಸಯೀದ್‌ ಅಜ್ಮಲ್‌, ಎಹ್ಸಾನ್‌ ಆದಿಲ್‌, ಹಸನ್‌ ಮಹಮೂದ್‌, ರಾಣಾ ಜಹಂದಾದ್‌ ಖಾನ್‌, ಫಾರೂಕ್‌ ಶಹಜಾದ್‌, ಇಮ್ರಾನ್‌ ಖಾಲಿದ್‌, ಅಮ್ಮಾರ್‌ ಮಹಮೂದ್‌ ಖಾನ್‌

ಒಟಾಗೊ ವೋಲ್ಟ್ಸ್‌
ಡೆರೆಕ್‌ ಡಿ ಬೂರ್ಡರ್‌ (ನಾಯಕ), ನಿಕೊಲಸ್‌ ಬಿಯರ್ಡ್‌, ಮೈಕಲ್‌ ಬ್ರೇಸ್‌ವೆಲ್‌, ನೀಲ್‌ ಬ್ರೂಮ್‌, ಇಯಾನ್‌ ಬಟ್ಲರ್‌, ಮಾರ್ಕ್‌ ಕ್ರೆಗ್‌, ಜೇಕಬ್‌ ಡಫಿ, ಬ್ರೆಂಡನ್‌ ಮೆಕ್ಲಮ್‌, ಜೇಮ್ಸ್‌ ಮೆಕ್‌ಮಿಲನ್‌, ಜೇಮ್ಸ್‌ ನೀಶಮ್‌, ಆರನ್‌ ರೆಡ್ಮಂಡ್‌, ಹಾಮಿಷ್‌ ರುದರ್‌ಫರ್ಡ್‌, ಟೆನ್‌ ಡಾಶ್ಕೆ, ನೀಲ್‌ ವಾಗ್ನೆರ್‌

ಸನ್‌ರೈಸರ್ಸ್‌ ಹೈದರಾಬಾದ್‌
ಶಿಖರ್‌ ಧವನ್‌ (ನಾಯಕ), ಪಾರ್ಥಿವ್‌ ಪಟೇಲ್‌, ಕೆಮರಾನ್‌ ವೈಟ್‌, ಜೆಪಿ ಡುಮಿನಿ, ಡೆಲ್‌ ಸ್ಟೇನ್‌, ಡರೆನ್‌ ಸಮಿ, ವಿಪ್ಲವ್‌ ಸಮಂತರಾಯ್‌, ತಿಸಾರ ಪೆರೇರಾ, ಕರಣ್‌ ಶರ್ಮ, ಹನುಮ ವಿಹಾರಿ, ಆಶೀಶ್‌ ರೆಡ್ಡಿ, ಇಶಾಂತ್‌ ಶರ್ಮ, ಆನಂದ್‌ ರಾಜನ್‌

ಕಂದುರತಾ ಮರೂನ್ಸ್‌
ಲಾಹಿರು ತಿರಿಮನ್ನೆ (ನಾಯಕ), ನುವಾನ್‌ ಕುಲಶೇಖರ, ಉಪುಲ್‌ ತರಂಗ, ತಿಲಿನಾ ಕಂದಾಂಬಿ, ಕುಮಾರ ಸಂಗಕ್ಕಾರ, ಶೆಹಾನ್‌ ಜಯಸೂರ್ಯ, ಚಾಮರ ಸಿಲ್ವ, ಮಿಲಿಂದಾ ಸಿರಿವರ್ಧನ, ದಿಲ್ಹಾರ ಲೋಕುಹೆಟ್ಟಿಗೆ, ಧಮ್ಮಿಕಾ ಪ್ರಸಾದ್‌, ಅಜಂತಾ ಮೆಂಡಿಸ್‌, ಕೌಶಲ್‌ ಲೋಕುರಚ್ಚಿ, ಲಾಹಿರು ಜಯರತ್ನೆ, ಧನಂಜಯ ಡಿಸಿಲ್ವಾ, ಸೂರಜ್‌ ರಣದೀವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT