ADVERTISEMENT

ಸಾಧಕರಿಗೆ ಆತ್ಮೀಯ ಸನ್ಮಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಬೆಂಗಳೂರು: ಲಖನೌನಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಸ್ನೂಕರ್‌ ಹಾಗೂ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಸ್ಪರ್ಧಿಗಳಿಗೆ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ (ಕೆಎಸ್‌ಬಿಎ) ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.

ಎಂಟು ಬಾರಿಯ ವಿಶ್ವ ಚಾಂಪಿ ಯನ್  ಪಂಕಜ್‌ ಅಡ್ವಾಣಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಫೈನಲ್‌ನಲ್ಲಿ 6–3ರಲ್ಲಿ ರೈಲ್ವೇಸ್‌ನ ಕಮಲ್‌ ಚಾವ್ಲಾ ಅವರನ್ನು ಮಣಿಸಿದ್ದರು. ಕರ್ನಾಟಕದ ಆಟಗಾರ ಈ ಟೂರ್ನಿಯಲ್ಲಿ ಗೆದ್ದ ಎಂಟನೇ ಮತ್ತು ಒಟ್ಟಾರೆ 24ನೇ ಪ್ರಶಸ್ತಿ ಇದಾಗಿದೆ.

ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ವಿದ್ಯಾ ಪಿಳ್ಳೈ, ಉಮಾದೇವಿ, ಚಿತ್ರಾ ಮಗಿಮೈರಾಜ್‌, ಬಿ. ಭಾಸ್ಕರ್‌, ಅರ್ಜುನ್‌ ಮೆಹ್ತಾ, ಎಂ.ಎಲ್‌. ಲಕ್ಷ್ಮಣ್‌ ಅವರನ್ನೂ ಸನ್ಮಾನಿಸಲಾ ಯಿತು. ಚಿನ್ನ (₨ 50,000), ಬೆಳ್ಳಿ (₨ 35,000) ಮತ್ತು ಕಂಚು (₨ 25,000) ಜಯಿಸಿದವರಿಗೆ ಕೆಎಸ್‌ಬಿಎ ಬಹುಮಾನ ನೀಡಿ ಗೌರವಿಸಿತು. ಸಬ್‌್ ಜೂನಿಯರ್‌ ವಿಭಾಗದಲ್ಲಿ ಸಾಧನೆ ಮಾಡಿದ ವರಿಗೂ ₨ 10,000 ಬಹುಮಾನ ನೀಡಲಾಯಿತು.

‘ಟೂರ್ನಿಯೊಂದರಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಪೀಟರ್‌ ಎಡ್ಬನ್‌ ಅವರನ್ನು ಸೋಲಿಸಿದ್ದೆ. ನಂತರದ ಪಂದ್ಯದಲ್ಲಿ ನಾನು ಗೆಲುವು ಪಡೆದಾಗ ಎಡ್ಬನ್‌ ನನ್ನ ಬಳಿ ಬಂದು ಅಭಿನಂದನೆ ಸಲ್ಲಿಸಿದರು.  ಪ್ರತಿ ಆಟಗಾರನ ಬಗ್ಗೆಯೂ ಗೌರವ ಹೊಂದಿದ್ದ ಅವರ ಗುಣ ನನಗೆ ತುಂಬಾ ಇಷ್ಟವಾಯಿತು. ಆಗಿನಿಂದಲೂ ನಾನು  ಸೋಲಲಿ ಅಥವಾ ಗೆಲ್ಲಲಿ ಎದುರಾಳಿ ಆಟಗಾರನನ್ನು ಗೌರವಿಸುವುದನ್ನು ಕಲಿತಿದ್ದೇನೆ’ ಎಂದು ಪಂಕಜ್‌ ಅಡ್ವಾಣಿ ನುಡಿದರು.

ಮುಂಬರುವ ಚೀನಾ ಓಪನ್‌ ಮತ್ತು ವರ್ಷದ ಕೊನೆಯ ಮಹತ್ವದ ಟೂರ್ನಿ ವಿಶ್ವ ಚಾಂಪಿಯನ್‌ಷಿಪ್‌ಗೆ ಹೆಚ್ಚು ಒತ್ತು ನೀಡಿ ಅಭ್ಯಾಸ ನಡೆಸುತ್ತಿದ್ದೇನೆ. 
-ಪಂಕಜ್‌ ಅಡ್ವಾಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT