ADVERTISEMENT

`ಸಾಧನೆಗಿಂತ ಪಾಲಕರ ಪ್ರೀತಿ ದೊಡ್ಡದು'

ಜೂನಿಯರ್ ಡೇವಿಸ್ ಕಪ್‌ನಲ್ಲಿ ಆಡಲಿರುವ ಕಡೂರಿನ ನಿಕ್ಷೇಪ್

ಪ್ರಮೋದ ಜಿ.ಕೆ
Published 6 ಏಪ್ರಿಲ್ 2013, 19:59 IST
Last Updated 6 ಏಪ್ರಿಲ್ 2013, 19:59 IST

ಬೆಂಗಳೂರು: `ಟೂರ್ನಿಗಳಲ್ಲಿ ಆಡಲು ಬೇರೆ ರಾಜ್ಯಗಳಿಗೆ ತೆರಳುವಾಗ ಜೊತೆಗಿದ್ದು ಧೈರ್ಯ ಹೇಳಿ, ಸೋತಾಗಲೂ ಸ್ಥೈರ್ಯ ತುಂಬಿದ್ದು ಪಾಲಕರು. ಅವರು ನನಗೆ ತೋರಿಸುವ ಪ್ರೀತಿಯ ಮುಂದೆ ನನ್ನ ಸಾಧನೆ ತೀರಾ ಚಿಕ್ಕದೆನಿಸುತ್ತದೆ' ಎಂದು ಜೂನಿಯರ್ ಡೇವಿಸ್ ಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಬಿ.ಆರ್. ನಿಕ್ಷೇಪ್ ಹೇಳಿದರು.

ದಕ್ಷಿಣ ಕೊರಿಯಾದಲ್ಲಿ ಏಪ್ರಿಲ್ 22ರಿಂದ ಜೂನಿಯರ್ ಡೇವಿಸ್ ಕಪ್ (ಏಷ್ಯಾ ಒಸೀನಿಯಾ ಗುಂಪು) ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಡೂರಿನ ನಿಕ್ಷೇಪ್ ಪಡೆದುಕೊಂಡಿದ್ದಾರೆ.

ಡೇವಿಸ್ ಕಪ್‌ಗೆ ನಾಲ್ವರು ಆಟಗಾರರನ್ನು ಒಳಗೊಂಡ ಭಾರತ ತಂಡವನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಶನಿವಾರ ಪ್ರಕಟಿಸಿದೆ. ಈ ತಂಡದಲ್ಲಿ ಕನ್ನಡಿಗ ನಿಕ್ಷೇಪ್, ದೆಹಲಿಯ ಸುಮಿತ್ ನಾಗಲ್, ಕರ್ವಿತ್ ಬಾತ್ರಾ ಹಾಗೂ ವಿಶು ಪ್ರಸಾದ್ ಇದ್ದಾರೆ. ನರೇಂದ್ರನಾಥ್ ಭಾರತ ತಂಡದ ಕೋಚ್ ಆಗಿದ್ದಾರೆ.

ಈ ಮೊದಲು ಕರ್ನಾಟಕದ ವಿನೋದ್ ಗೌಡ ಜೂನಿಯರ್ ಡೇವಿಸ್ ಕಪ್‌ನಲ್ಲಿ ಆಡಿದ್ದರು. ನಿಕ್ಷೇಪ್ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವಾಣಿ ವಿದ್ಯಾಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ. ಜನವರಿಯಲ್ಲಿ ನಡೆದ ಮೂರು ಪ್ರಮುಖ ರಾಷ್ಟ್ರೀಯ ಟೂರ್ನಿಗಳಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿದ್ದರು. ಇದೇ ಖುಷಿಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದ್ದು ಈ ಆಟಗಾರನ ಖುಷಿಯನ್ನು ದುಪ್ಪಟ್ಟಾಗಿಸಿದೆ. ಈ ವೇಳೆ ನಿಕ್ಷೇಪ್ `ಪ್ರಜಾವಾಣಿ'ಗೆ ನೀಡಿದ ವಿಶೇಷ ಸಂದರ್ಶನದ ಸಾರ ಇಲ್ಲಿದೆ.

-ಜೂನಿಯರ್ ಡೇವಿಸ್ ಕಪ್‌ನಲ್ಲಿ ಆಡಲು ಆಯ್ಕೆಯಾದ ವಿಷಯ ಗೊತ್ತಾದಾಗ ಏನನ್ನಿಸಿತು?
ಒಂದು ವಾರದ ಹಿಂದೆ ವಿಷಯ ತಿಳಿದಿತ್ತು. ಆದರೆ, ಇಷ್ಟು ಬೇಗ ಕಂಡ ಕನಸು ನನಸಾಗುತ್ತದೆ ಎನ್ನುವ ನಿರೀಕ್ಷೆಯಿರಲಿಲ್ಲ. ಅಪ್ಪ ರವಿ   ಕುಮಾರ್, ಅಮ್ಮ ಶೋಭಾ ನನಗಿಂತ ಹೆಚ್ಚು ಖುಷಿ ಪಟ್ಟರು.

-ಮೊದಲ ಸಲ ಭಾರತವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದೆ. ಈ ಬಗ್ಗೆ?
ನಿಜಕ್ಕೂ ಖುಷಿಯಾಗಿದೆ. ಆದರೆ, ಎದುರಿಗೆ ದೊಡ್ಡ ಸವಾಲಿದೆ ಎನ್ನುವ ಎಚ್ಚರಿಕೆಯೂ ಇದೆ. ಸಾಕಷ್ಟು ಸ್ಪರ್ಧೆ ಇರುವ ಕಾರಣ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಾದ ಜವಾಬ್ದಾರಿಯಿದೆ. ರಾಷ್ಟ್ರೀಯ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನ ಇದಕ್ಕೆ ನೆರವಾಗಬಹುದು.

-ನಿಮ್ಮ ಪಾಲಕರ ಬಗ್ಗೆ ಹೇಳಿ?
ಇಲ್ಲಿಯವರೆಗೆ ಮಾಡಿರುವ ಸಾಧನೆಗೆ ಅವರೇ ಕಾರಣ. ಬೇರೆ ಬೇರೆ ಟೂರ್ನಿಗಳಲ್ಲಿ ಆಡಲು ಹೋದಾಗ ಅಪ್ಪ ಅಥವಾ ಅಮ್ಮ ಜೊತೆಗಿರುತ್ತಿದ್ದರು. ಅವರನ್ನು ನಿರಾಸೆಗೊಳಿಸಬಾರದು ಎನ್ನುವ ಕಾರಣಕ್ಕೆ ಪ್ರತಿ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು ಸಾಕಷ್ಟು ಪ್ರಯತ್ನ ಪಡುತ್ತಿದ್ದೆ. ಅವರು ನನಗೆ ತೋರಿಸುವ ಪ್ರೀತಿ ಮುಂದೆ ನನ್ನ ಸಾಧನೆ ಏನೇನೂ ಅಲ್ಲ.

-ಈ ಟೂರ್ನಿಗೆ ಹೇಗೆ ತಯಾರಿ ನಡೆಸುತ್ತಿದ್ದೀರಿ?
ಸದ್ಯಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿರುವ ಕಾರಣ ಕೆಲ ದಿನ ಅಭ್ಯಾಸದಿಂದ ದೂರ ಉಳಿದಿದ್ದೇನೆ. ಸೋಮವಾರ (ಏ. 8) ಅಭ್ಯಾಸ ಆರಂಭಿಸುತ್ತೇನೆ. ನವದೆಹಲಿಯಲ್ಲಿ 12ರಿಂದ ಭಾರತ ತಂಡದ ಶಿಬಿರ ನಡೆಯಲಿದೆ. ಅಲ್ಲಿ ಪಾಲ್ಗೊಳ್ಳುತ್ತೇನೆ.

-ಟೆನಿಸ್‌ನಲ್ಲಿಯೇ ಸಾಧನೆ ಮಾಡಬೇಕೆನ್ನುವ ಕನಸು ಹುಟ್ಟಲು ಕಾರಣವೇನು. ಸ್ಫೂರ್ತಿ ಯಾರು?
ಬಾಲ್ಯದಲ್ಲಿ ಟಿ.ವಿ.ಯಲ್ಲಿ ಟೆನಿಸ್ ಪಂದ್ಯಗಳನ್ನು ನೋಡುತ್ತಿದ್ದೆ. ಒಂದು ಸಲವಾದರೂ ದೇಶವನ್ನು ಪ್ರತಿನಿಧಿಸಬೇಕು. ಅದರಲ್ಲೂ ಡೇವಿಸ್ ಕಪ್‌ನಲ್ಲಿ ಆಡಬೇಕೆನ್ನುವ ತುಡಿತ ಇತ್ತು. ಆದ್ದರಿಂದ ರಫೆಲ್ ನಡಾಲ್ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಆಟವನ್ನೇ ಹೆಚ್ಚಾಗಿ ವೀಕ್ಷಿಸುತ್ತಿದ್ದೆ.

-ಯಾವ ದೇಶದವರು ನಿಮಗೆ ಸವಾಲು ಎನಿಸುತ್ತಾರೆ?
ಚೀನಾ, ಕೊರಿಯಾ ಹಾಗೂ ಆಸ್ಟ್ರೇಲಿಯಾದವರು ಪ್ರಬಲ ಪೈಪೋಟಿ ನೀಡುತ್ತಾರೆ. ಅವರನ್ನು ಎದುರಿಸುವ ಸವಾಲೂ ನಮ್ಮ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT