ADVERTISEMENT

ಸಾಧನೆಗೆ ಪ್ರೇರಣೆಯಾಗುವ ಜಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:00 IST
Last Updated 12 ಸೆಪ್ಟೆಂಬರ್ 2011, 19:00 IST
ಸಾಧನೆಗೆ ಪ್ರೇರಣೆಯಾಗುವ ಜಯ
ಸಾಧನೆಗೆ ಪ್ರೇರಣೆಯಾಗುವ ಜಯ   

ಬೆಂಗಳೂರು: `ಸಾಕಷ್ಟು ವಿವಾದಗಳ ನಡುವೆಯೂ ಪುಟಿದೆದ್ದು ಬಂದ ನಮ್ಮ ಯುವ ಆಟಗಾರರು ಏಷ್ಯನ್ ಚಾಂಪಿಯನ್ಸ್ ಟ್ರೋಫಿ  ಹಾಕಿ ಟೂರ್ನಿಯಲ್ಲಿ  ಒಂದೂ ಪಂದ್ಯದಲ್ಲಿ ಸೋಲು ಕಾಣಲಿಲ್ಲ. ಅವರು ಈ ಟೂರ್ನಿಯಲ್ಲಿ ಆಡಿದ ಆಟ ಮುಂದಿನ ಎಲ್ಲಾ ಪಂದ್ಯದ ಗೆಲುವಿಗೆ ಸ್ಪೂರ್ತಿ...~

ಹೀಗೆ ಅತ್ಯಂತ ಭಾವುಕರಾಗಿ `ಪ್ರಜಾವಾಣಿ~ಯೊಂದಿಗೆ ಸಂತಸ ಹಂಚಿಕೊಂಡಿದ್ದು ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ಎ.ಬಿ. ಸುಬ್ಬಯ್ಯ.

ಭಾನುವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವನ್ನು 2-4ಗೋಲುಗಳಿಂದ ಪೆನಾಲ್ಟಿ ಶೂಟೌಟ್ ಮೂಲಕ ಸೋಲಿಸಿದ ಭಾರತ ತಂಡದ ಸಾಧನೆ ಬಗ್ಗೆ ಸಂತಸದಿಂದಲೇ ಕೆಲ ಹಿರಿಯ ಆಟಗಾರರು ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ.

* ಹೊಸ ಆಟಗಾರರಿಗೆ ಸ್ಪೂರ್ತಿ ನೀಡುವಂತ ಗೆಲುವು ಇದು. ಈ ಗೆಲುವು ಆಟಗಾರರ ಹಾಗೂ ರಾಷ್ಟ್ರೀಯ ಕ್ರೀಡೆಯ ಬಲವನ್ನು ಹೆಚ್ಚಿಸಿದೆ. ಇದರಲ್ಲಿ ಕೋಚ್ ಮೈಕಲ್ ನಾಬ್ಸ್ ಸಹ ಉತ್ತಮ ಕೆಲಸ ಮಾಡಿದ್ದಾರೆ. ಆಟಗಾರರಿಗೆ ಎಲ್ಲಾ ರೀತಿಯ ಬೆಂಬಲ ನೀಡಿದ ಕಮಾಂಡರ್ ಗುರುದೀಪ್ ಸಿಂಗ್ ಅವರ ಸೇವೆಯನ್ನು ಇಲ್ಲಿ ಸ್ಮರಿಸಲೇಬೇಕು. ಭಾರತ ತಂಡ ಬೆಂಗಳೂರಿನಲ್ಲಿ ಶಿಬಿರ ಮುಗಿಸಿ ಹೋಗುವಾಗ `ಚಿನ್ನ~ದ ನಗೆಯೊಂದಿಗೆ ಮರಳಬೇಕು ಎಂದು ಹಾರೈಸಿ  ರಾಷ್ಟ್ರಧ್ವಜವನ್ನು ಕಾಣಿಕೆಯಾಗಿ ನೀಡಿದ್ದರು. ಅವರ ಕನಸು ನನಸಾಯಿತು. 
 -ಎ.ಬಿ.ಸುಬ್ಬಯ್ಯ, ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ

* ಫೈನಲ್ ಪಂದ್ಯದಲ್ಲಿನ ಗೆಲುವು ಪ್ರತಿ ಸಾಧನೆಗೂ ಪ್ರೇರಣೆಯಾಗುವ ಸಂಗತಿ. ಯುವ ಆಟಗಾರರು ತಮಗೆ ಅನುಭವ ಇಲ್ಲ ಎನ್ನುವ ಕೊರಗನ್ನು ದೂರ ಮಾಡಿದರು. ಅನುಭವಿ ಆಟಗಾರರ ಕೊರತೆಯನ್ನು ಸಮರ್ಥವಾಗಿ ನಿಭಾಯಿಸಿದರು. ಇದರಲ್ಲೂ ಕೋಚ್ ನಾಬ್ಸ್ ಅವರ ಪಾಲೂ ಇದೆ. ಭಾರತ ಖಂಡಿತವಾಗಿಯೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತದೆ.
 -ಎಂ.ಎಂ. ಸೋಮಯ್ಯ, ಮಾಜಿ ಆಟಗಾರ

* ಕರ್ನಾಟಕದ ರಘನಾಥ್ ಸೇರಿದಂತೆ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಭಾರತ ಉತ್ತಮ ಸಾಧನೆ ಮಾಡಿತು. ನಿಜಕ್ಕೂ ಮೆಚ್ಚುವಂತ ವಿಷಯ. ಆದರೆ ಪ್ರಭಾವಿ ಎನಿಸುವ ಹಾಲೆಂಡ್, ಜರ್ಮನಿ ತಂಡಗಳ ಎದುರು ಇದೇ ಮಾದರಿಯಲ್ಲಿ ಪ್ರದರ್ಶನ ನೀಡಬೇಕು. ಮುಖ್ಯವಾಗಿ ಆಟಗಾರರು ಫಿಟ್‌ನೆಸ್ ಉಳಿಸಿಕೊಳ್ಳಬೇಕು. ಹಾಕಿ ಇಂಡಿಯಾ ಹಾಗೂ ಭಾರತ ಹಾಕಿ ಫೆಡರೇಷನ್ ನಡುವಣ ವಿವಾದ ಆಟಗಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಷ್ಟ್ರೀಯ ಕ್ರೀಡೆಗೆ ಇನ್ನೂ ಹೆಚ್ಚಿನ ಬಲ ಬರಲಿದೆ.
 -ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಕಾರ್ಯದರ್ಶಿ

19ರಿಂದ ಮತ್ತೆ ಶಿಬಿರ: ಭಾರತ ಹಾಕಿ ತಂಡದ ರಾಷ್ಟ್ರೀಯ ಶಿಬಿರ ಮತ್ತೆ ಸೆಪ್ಟೆಂಬರ್ 19ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಇಲ್ಲಿನ ಸೌಲಭ್ಯಗಳು ಹಾಗೂ ವಾತಾವರಣ ಕೋಚ್ ನಾಬ್ಸ್ ಅವರಿಗೆ ಸಾಕಷ್ಟು ಹಿಡಿಸಿವೆ. ಆದ್ದರಿಂದ ಬೆಂಗಳೂರನ್ನು ಹಾಕಿ ತರಬೇತಿ ಕೇಂದ್ರ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ಸುಬ್ಬಯ್ಯ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.