ADVERTISEMENT

ಸಿಂಧು, ಸೈನಾಗೆ ಸೋಲು

ಬ್ಯಾಡ್ಮಿಂಟನ್‌: ಕಶ್ಯಪ್‌ಗೆ ನಿರಾಸೆ; ಭಾರತದ ಸವಾಲು ಅಂತ್ಯ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಬಾಸೆಲ್‌ (ಪಿಟಿಐ): ಭಾರತದ ಭರವಸೆಯ ಆಟಗಾರ್ತಿ ಪಿ.ವಿ. ಸಿಂಧು ಇಲ್ಲಿ ನಡೆಯುತ್ತಿರುವ ಸ್ವಿಸ್‌ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು. ಸೈನಾ ನೆಹ್ವಾಲ್‌ ಮತ್ತು ಪರುಪ್ಪಳ್ಳಿ ಕಶ್ಯಪ್‌ ಕೂಡಾ ನಿರಾಸೆ ಅನುಭವಿಸಿದ ಕಾರಣ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿತ್ತು.

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಪಂದ್ಯದಲ್ಲಿ ಸಿಂಧು 21-18, 12-21, 19-21 ರಲ್ಲಿ ಚೀನಾದ ಯುವ ಆಟಗಾರ್ತಿ ಸುನ್‌ ಯು ಕೈಯಲ್ಲಿ ಪರಾಭವಗೊಂಡರು. ಮೊದಲ ಸೆಟ್‌ ಗೆದ್ದುಕೊಂಡ ಭಾರತದ ಆಟಗಾರ್ತಿ ಆ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟರು.

ಸಿಂಧು ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಚೀನಾದ ಶಿಕ್ಸಿಯಾನ್‌್ ವಾಂಗ್‌ಗೆ ಆಘಾತ ನೀಡಿದ್ದರು.
ಹೈದರಾಬಾದ್‌ನ ಆಟಗಾರ್ತಿ 21-17, 21-15 ರಲ್ಲಿ ವಾಂಗ್‌ ವಿರುದ್ಧ ಜಯ ಸಾಧಿಸಿದ್ದರು. ಈ ಪಂದ್ಯ 45 ನಿಮಿಷಗಳ ಕಾಲ ನಡೆಯಿತು. ಎರಡು ಬಾರಿಯ ಆಲ್‌ ಇಂಗ್ಲೆಂಡ್‌ ಓಪನ್ ಚಾಂಪಿಯನ್‌ ಸಿಂಧು ಅವರ ಆಟದ ಎದುರು ತಬ್ಬಿಬ್ಬಾದರು.

ಸೈನಾಗೆ ಸೋಲು: ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸಿದರು. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಹೈದರಾಬಾದ್‌ನ ಆಟಗಾರ್ತಿ 17-21, 2-21 ರಲ್ಲಿ ಚೀನಾದ ಯಿಹಾನ್‌ ವಾಂಗ್‌ ಕೈಯಲ್ಲಿ ಪರಾಭವಗೊಂಡರು. ವಿಶ್ವದ ಮೂರನೇ ರ್‍್ಯಾಂಕ್‌ನ ಆಟಗಾರ್ತಿ ಕೇವಲ 38 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.
 
ಕಶ್ಯಪ್‌ಗೆ ನಿರಾಸೆ: ಪಿ. ಕಶ್ಯಪ್‌ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು. ಶನಿವಾರ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಕಶ್ಯಪ್‌ 17-21, 11-21 ರಲ್ಲಿ ಚೀನಾ ತೈಪೆಯ ಹೊವೆಯ್‌ ತಿಯಾನ್‌ ಎದುರು ಪರಾಭವಗೊಂಡರು. ಇವರಿಬ್ಬರು ಇದೇ ಮೊದಲ ಬಾರಿಗೆ ಪರಸ್ಪರ ಎದುರಾಗಿದ್ದರು. ತಿಯಾನ್‌ 42 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಕಶ್ಯಪ್‌ ಶುಕ್ರವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ 21-15, 21-23, 21-18 ರಲ್ಲಿ ಆರನೇ ಶ್ರೇಯಾಂಕದ ಆಟಗಾರ ಚೀನಾ ತೈಪೆಯ ತಿಯೆನ್‌ ಚೆನ್‌ ಚೌ ವಿರುದ್ಧ ಜಯ ಸಾಧಿಸಿದ್ದರು. ಭಾರತದ ಆಟಗಾರ ಒಂದು ಗಂಟೆ 14 ನಿಮಿಷಗಳಲ್ಲಿ ಗೆಲುವು ಪಡೆದಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಅವರು ಚೇತರಿಕೆಯ ಪ್ರದರ್ಶನ ನೀಡಲು ವಿಫಲರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.