ADVERTISEMENT

ಸಿಎಸ್‌ಕೆಗೆ ಅವಕಾಶ: ಅಭಿಮಾನಿಗಳ ಖುಷಿ

ಪಿಟಿಐ
Published 7 ಡಿಸೆಂಬರ್ 2017, 20:02 IST
Last Updated 7 ಡಿಸೆಂಬರ್ 2017, 20:02 IST
ಮಹೇಂದ್ರ ಸಿಂಗ್ ದೋನಿ
ಮಹೇಂದ್ರ ಸಿಂಗ್ ದೋನಿ   

ಚೆನ್ನೈ: ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಆಡಲು ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ)ಗೆ ಅವಕಾಶ ಲಭಿಸಿರುವುದು ಇಲ್ಲಿನ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ತಂಡಕ್ಕೆ ಮಹೇಂದ್ರ ಸಿಂಗ್ ದೋನಿ ಮರಳುವ ಸಾಧ್ಯತೆ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಬುಧವಾರ ಸಭೆ ನಡೆಸಿದ ಐಪಿಎಲ್ ಆಡಳಿತ ಮಂಡಳಿ ಸಿಎಸ್‌ಕೆ ಮತ್ತು ರಾಜಸ್ತಾನ ರಾಯಲ್ಸ್‌ ತಂಡಗಳ ಮೇಲಿನ ಅಮಾನತು ವಾಪಸ್ ಪಡೆದಿತ್ತು. ಹೀಗಾಗಿ 2018ರ ಐಪಿಎಲ್‌ನಲ್ಲಿ ಆಡಲು ಈ ತಂಡಗಳಿಗೆ ಹಸಿರು ನಿಶಾನೆ ಲಭಿಸಿತ್ತು. ಪ್ರತಿ ತಂಡಗಳಿಗೆ ಈ ಹಿಂದಿನ ಐದು ಮಂದಿ ಆಟಗಾರರನ್ನು ವಾಪಸ್ ತಂಡಕ್ಕೆ ಕರೆಸಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿತ್ತು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ದೋನಿ ವಾಪಸಾಗುವುದು ಖಚಿತವಾಗಿತ್ತು.

ಸುರೇಶ್ ರೈನಾ ಮತ್ತು ರವೀಂದ್ರ ಜಡೇಜ ಅವರನ್ನು ಕೂಡ ಫ್ರಾಂಚೈಸ್‌ ವಾಪಸ್ ಪಡೆದುಕೊಳ್ಳಲಿದೆ ಎಂಬುದು ಅಭಿಮಾನಿಗಳ ಭರವಸೆ. ಸಿಎಸ್‌ಕೆ ನಿರ್ದೇಶಕ ಕೆ.ಜಾರ್ಜ್‌ ಜಾನ್ ಕೂಡ ಆಡಳಿತ ಮಂಡಳಿಯ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದು ‘ತಂಡದ ಆಧಾರಸ್ತಂಭವಾಗಿದ್ದ ಮಹೇಂದ್ರ ಸಿಂಗ್ ದೋನಿ ಅವರನ್ನು ವಾಪಸ್‌ ಕರೆಸಿಕೊಳ್ಳಲು ಫ್ರಾಂಚೈಸ್‌ ಉತ್ಸುಕವಾಗಿದೆ’ ಎಂದು ಹೇಳಿದರು.

ADVERTISEMENT

₹ 80 ಕೋಟಿಗೇರಿದ ಮೊತ್ತ

ಪ್ರತಿ ಫ್ರಾಂಚೈಸ್‌ ಆಟಗಾರರ ವೇತನಕ್ಕಾಗಿ ವ್ಯಯಿಸುವ ಒಟ್ಟು ಮೊತ್ತವನ್ನು ₹ 60 ಕೋಟಿಯಿಂದ ₹ 80 ಕೋಟಿಗೆ ಏರಿಸುವುದಕ್ಕೂ ಆಡಳಿತ ಮಂಡಳಿ ನಿರ್ಧರಿಸಿದೆ. ತಂಡದಲ್ಲಿ ಉಳಿಸಿಕೊಳ್ಳುವ ಮೊದಲ ಮೂವರು ಆಟಗಾರರಿಗಾಗಿ ಒಟ್ಟು ₹ 33 ಕೋಟಿ ಮೊತ್ತವನ್ನು ವ್ಯಯಿಸುವುದಕ್ಕೂ ಅವಕಾಶ ನೀಡಲಾಗಿದೆ.

ಮೊದಲ ಬಾರಿ ತಂಡ ಸೇರಿಕೊಳ್ಳುವ ಭಾರತದ ಆಟಗಾರರ ಮೂಲಬೆಲೆಯಲ್ಲಿ ₹ 10 ಲಕ್ಷ ಏರಿಕೆಯಾಗಿದ್ದು ಈಗಾಗಲೇ ಆಡಿದ ಆಟಗಾರರ ಮೂಲಬೆಲೆಯನ್ನು ₹30 ಲಕ್ಷದಿಂದ ₹50 ಲಕ್ಷಕ್ಕೆ ಏರಿಸಲಾಗಿದೆ.

ಆಟಗಾರರ ಹರಾಜು ಕಾರ್ಯಕ್ರಮವನ್ನು ಜನವರಿ 29 ಅಥವಾ ಫೆಬ್ರುವರಿ ಮೂರರಂದು ನಡೆಸುವ ಸಾಧ್ಯತೆ ಇದೆ. 2019ರ ಐಪಿಎಲ್‌ನಲ್ಲಿ ಆಟಗಾರರ ವೇತನಕ್ಕಾಗಿ ₹ 82 ಕೋಟಿ ಮತ್ತು 2020ರ ಟೂರ್ನಿಯಲ್ಲಿ ₹ 85 ಕೋಟಿ ವ್ಯಯಿಸಲು ಅವಕಾಶ ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.