ನವದೆಹಲಿ (ಪಿಟಿಐ): ಐಪಿಎಲ್‌ನಲ್ಲಿ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹಾಗೂ ರಾಜಸ್ತಾನ ರಾಯಲ್ಸ್ (ಆರ್‌ಆರ್) ತಂಡಗಳನ್ನು ಅಮಾನತುಗೊಳಿಸುವಂತೆ ಬಿಸಿಸಿಐ `ಹಂಗಾಮಿ ಅಧ್ಯಕ್ಷ' ಜಗಮೋಹನ್ ದಾಲ್ಮಿಯ ಅವರಿಗೆ ಪತ್ರ ಬರೆದಿದ್ದೆ ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಐ.ಎಸ್.ಬಿಂದ್ರಾ ನುಡಿದಿದ್ದಾರೆ.
`ಈ ಪತ್ರವನ್ನು ನಾನು ಸೋಮವಾರ ನಡೆದ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನವೇ ಬರೆದಿದ್ದೆ. ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದೆ. ಆದರೆ ಈ ತಂಡಗಳ ತನಿಖೆ ನಡೆಸಲಾಗುವುದು ಎಂದು ಮಾತ್ರ ದಾಲ್ಮಿಯ ಹೇಳಿದರು' ಎಂದು ಅವರು ಹೇಳಿದ್ದಾರೆ.
ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿರುವ ದೋನಿ ಅವರ ಬಗ್ಗೆ ಪ್ರತಿಕ್ರಿಯಿಸಿದ ಬಿಂದ್ರಾ, `ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿಲ್ಲ' ಎಂದು ಸ್ಪಷ್ಟಪಡಿಸಿದರು. ಈ ವಿಷಯದ ಬಗ್ಗೆ ಮಂಡಳಿಯು ದೋನಿಗೆ ಪತ್ರ ಬರೆಯಲಿದೆ ಎಂದಿರುವ ನೂತನ ಖಜಾಂಚಿ ರವಿ ಸಾವಂತ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, `ಈ ಬಗ್ಗೆ ಮಾತನಾಡಲು ಸಾವಂತ್‌ಗೆ ಏನು ಅಧಿಕಾರವಿದೆ? ನೋಟಿಸ್ ವಿಷಯದಲ್ಲಿ ಖಜಾಂಚಿ ಪ್ರತಿಕ್ರಿಯೆ ನೀಡುವಂತಿಲ್ಲ. ಅದೊಂದು ಮೂರ್ಖತನದ ಹೇಳಿಕೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.