ADVERTISEMENT

ಸಿಡ್ನಿಯಲ್ಲೂ ಭಾರತಕ್ಕೆ ಸೋಲೇ ಗತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ಸಿಡ್ನಿ (ರಾಯಿಟರ್ಸ್/ಪಿಟಿಐ): ಸೋಲಲೆಂದೇ ಕಣಕ್ಕಿಳಿದವರ ಪರಿಸ್ಥಿತಿ ಭಾರತ ತಂಡದ್ದು! ಇನ್ನೂ ಸೋಲನ್ನು ತಪ್ಪಿಸಲು ಯಾರಿಂದ ಸಾಧ್ಯ ಹೇಳಿ? ಆಸ್ಟ್ರೇಲಿಯಾದಲ್ಲಿ ಯಾವತ್ತೂ ಸರಣಿ ಗೆಲ್ಲಲು ಸಾಧ್ಯವಾಗದ ಭಾರತಕ್ಕೆ ಈ ಬಾರಿ ಒಂದು ಸುವರ್ಣಾವಕಾಶವಿತ್ತು.

ಆದರೆ ಸಾವಿರಾರು ರನ್ ಜೋಡಿಸಿಟ್ಟು ಅನುಭವಿ ಬ್ಯಾಟ್ಸ್‌ಮನ್‌ಗಳೆಂಬ ಹಣೆಪಟ್ಟಿ ಹೊಂದಿರುವ ಪ್ರವಾಸಿ ತಂಡದ ಆಟಗಾರರ ಕೆಟ್ಟ ಪ್ರದರ್ಶನ ಮತ್ತೊಂದು ಹೀನಾಯ ಸೋಲಿಗೆ ಆಹ್ವಾನ ನೀಡಿತು. ಇನ್ನೂ ಸರಣಿ ಗೆಲುವು ಅಸಾಧ್ಯದ ಮಾತು.

ಏಕೆಂದರೆ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 68 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಭಾರತ ಈಗ ಆಡುತ್ತಿರುವ ರೀತಿ ನೋಡಿದರೆ 0-4ರಲ್ಲಿ ಸೋತರೂ ಅಚ್ಚರಿಪಡಬೇಕಾಗಿಲ್ಲ.

ಎರಡೂ ಇನಿಂಗ್ಸ್‌ಗಳಿಂದ ಸೇರಿ ಮಹಿ ಪಡೆಗೆ ಕಾಂಗರೂ ಪಡೆಯ ಮೊದಲ ಇನಿಂಗ್ಸ್ ಮೊತ್ತ ದಾಟಲು ಸಾಧ್ಯವಾಗಲಿಲ್ಲ. ಪಂದ್ಯದ ನಾಲ್ಕನೇ ದಿನವಾದ ಶುಕ್ರವಾರ ಭಾರತ ತನ್ನ ಎರಡನೇ ಇನಿಂಗ್ಸ್‌ನಲ್ಲಿ 110.5 ಓವರ್‌ಗಳಲ್ಲಿ 400 ರನ್‌ಗಳಿಗೆ ಗಂಟುಮೂಟೆ ಕಟ್ಟಿತು. ವಿದೇಶಿ ನೆಲದಲ್ಲಿ ಸತತ ಆರನೇ ಸೋಲು ಈ ತಂಡವನ್ನು ಬಂದಪ್ಪಳಿಸಿತು.

ಆಘಾತಕಾರಿ ಅಂಶವೆಂದರೆ 12 ವರ್ಷಗಳಲ್ಲಿ ಮೊದಲ ಬಾರಿ ಆಸ್ಟ್ರೇಲಿಯಾಕ್ಕೆ ತಮ್ಮ ಎದುರು ಇನಿಂಗ್ಸ್ ಗೆಲುವು ಸಾಧಿಸಲು ಭಾರತ ತಂಡದವರು ಅವಕಾಶ ಮಾಡಿಕೊಟ್ಟಿದ್ದು. ಮೈಕಲ್ ಕ್ಲಾರ್ಕ್ ಪಡೆಯನ್ನು ಇತ್ತೀಚಿನ ದಿನಗಳಲ್ಲಿ ದುರ್ಬಲ ತಂಡವೆಂದೇ ಹೇಳಲಾಗುತಿತ್ತು. ಇತ್ತೀಚೆಗಷ್ಟೇ ಈ ತಂಡದವರು ದಕ್ಷಿಣ ಆಫ್ರಿಕಾ ಎದುರು ಕೇವಲ 47 ರನ್‌ಗಳಿಗೆ ಆಲ್‌ಔಟ್ ಆಗಿ ಟೀಕೆಗೆ ಗುರಿಯಾಗಿದ್ದರು. ಜೊತೆಗೆ ವೇಗಿ ಮಿಷೆಲ್ ಜಾನ್ಸನ್ ಹಾಗೂ ಆಲ್‌ರೌಂಡರ್ ಶೇನ್ ವಾಟ್ಸನ್ ಗಾಯದಿಂದ ಹೊರಗುಳಿದಿದ್ದರು.

ಆದರೆ ಸಚಿನ್, ಸೆಹ್ವಾಗ್, ಲಕ್ಷ್ಮಣ್, ದ್ರಾವಿಡ್ ಅವರಂಥ ಆಟಗಾರರು ಇರುವ ತಂಡದ ಎದುರು ಪೂರ್ಣ ಪಾರಮ್ಯ ವೆುರೆದ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಕಳೆದುಕೊಂಡ ವಿಕೆಟ್ ಕೇವಲ ನಾಲ್ಕು. ನಾಯಕ ಕ್ಲಾರ್ಕ್ ಅಜೇಯ ತ್ರಿಶತಕ, ಪಾಂಟಿಂಗ್ ಹಾಗೂ ಹಸ್ಸಿ ಶತಕದ ಮೂಲಕ ದೋನಿ ಬಳಗವನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಹಾಕಿದರು.

ಈಗಾಗಲೇ ಸರಣಿಯಲ್ಲಿ 15 ವಿಕೆಟ್ ಕಬಳಿಸಿರುವ ವೇಗಿ ಬೆನ್ ಹಿಲ್ಫೆನ್ಹಾಸ್ ಅವರ ಬೌಲಿಂಗ್ ದಾಳಿಗೆ ಸಿಲುಕಿದ ಭಾರತ ತಂಡ `ಬ್ಯಾಟ್ಸ್‌ಮನ್ ಸ್ನೇಹಿ~ ಪಿಚ್‌ನಲ್ಲೂ ಪರದಾಡಿತು. ಗಂಭೀರ್ (83; 142 ಎಸೆತ, 11 ಬೌಂಡರಿ), ಸಚಿನ್ (80; 141 ಎಸೆತ, 9 ಬೌಂಡರಿ) ನೆರವು ಇಲ್ಲದಿದ್ದರೆ ಅಧೋಗತಿ.

ತುಂಬಾ ದಿನಗಳ ಬಳಿಕ ಅರ್ಧ ಶತಕ ಗಳಿಸಿದ ಗಂಭೀರ್ ಪಂದ್ಯದ ನಾಲ್ಕನೇ ದಿನ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ ಸಚಿನ್ ಹಾಗೂ ವಿ.ವಿ.ಎಸ್ ಲಕ್ಷ್ಮಣ್ (66; 119 ಎಸೆತ, 7 ಬೌಂಡರಿ) 4ನೇ ವಿಕೆಟ್‌ಗೆ 103 ರನ್ ಸೇರಿಸಿದರು.

ತಮ್ಮ ನೆಚ್ಚಿನ ಕ್ರೀಡಾಂಗಣದಲ್ಲಿ ಸಚಿನ್ ಶತಕಗಳ ಶತಕದ ಸಾಧನೆ ಮಾಡುತ್ತಾರೆ ಎಂದು ಹೆಚ್ಚಿನವರು ಭಾವಿಸಿದ್ದರು. ಆದರೆ ಸಾಂದರ್ಭಿಕ ಬೌಲರ್ ಕ್ಲಾರ್ಕ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಹೋದ ಸಚಿನ್ ಮೊದಲ ಸ್ಲಿಪ್‌ನಲ್ಲಿದ್ದ ಹಸ್ಸಿಗೆ ಕ್ಯಾಚಿತ್ತರು. ಆಗ ಕ್ರೀಡಾಂಗಣದ ಒಮ್ಮೆಲೇ ಮೌನ. ಅದು ಸೋಲಿನ ಮುನ್ಸೂಚನೆ ಕೂಡ ಆಗಿತ್ತು. ಆಗಲೇ ಆತಿಥೇಯ ತಂಡದವರು ಕೂಡ ಬಹುತೇಕ ಗೆಲುವಿನ ಸಂಭ್ರಮವನ್ನು ಆಚರಿಸಿದ್ದರು.

ಅದಕ್ಕೆ ಸಾಕ್ಷಿ ಎಂಬಂತೆ 14 ರನ್‌ಗಳ ಅಂತರದಲ್ಲಿ ಭಾರತ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಲಕ್ಷ್ಮಣ್ ಬೌಲ್ಡ್ ಆದ ಎಸೆತ ಪ್ರಭಾವಿಯಾಗಿತ್ತು. ಆದರೆ ದೋನಿ ಹಾಗೂ ವಿರಾಟ್ ಕೊಹ್ಲಿ ಬೇಜವಾಬ್ದಾರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಆರ್.ಅಶ್ವಿನ್ (62; 76 ಎಸೆತ, 9 ಬೌಂ, 1 ಸಿ.) ಹಾಗೂ ಜಹೀರ್ ಖಾನ್ (35; 26 ಎಸೆತ, 5 ಬೌಂ, 1 ಸಿ.) ಸೋಲನ್ನು ಕೊಂಚ ಹೊತ್ತು ಮುಂದೂಡಿದರು. ಇವರಿಬ್ಬರು ಎಂಟನೇ ವಿಕೆಟ್‌ಗೆ 56 ರನ್ ಸೇರಿಸಿದರು. ಆದರೆ ಅವರ ಪ್ರಯತ್ನ ಆರುವ ಮುನ್ನ ಪ್ರಜ್ವಲಿಸುವ ದೀಪದಂತೆ!


ಭಾರತ ಮೊದಲ ಇನಿಂಗ್ಸ್ 59.3 ಓವರ್‌ಗಳಲ್ಲಿ 191
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 163 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 659 ಡಿಕ್ಲೇರ್ಡ್
ಭಾರತ ಎರಡನೇ ಇನಿಂಗ್ಸ್ 110.5 ಓವರ್‌ಗಳಲ್ಲಿ 400
(ಗುರುವಾರದ ಅಂತ್ಯಕ್ಕೆ 41 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 114)

ಗೌತಮ್ ಗಂಭೀರ್ ಸಿ ಡೇವಿಡ್ ವಾರ್ನರ್ ಬಿ ಪೀಟರ್ ಸಿಡ್ಲ್  83
ಸಚಿನ್ ತೆಂಡೂಲ್ಕರ್ ಸಿ ಮೈಕ್ ಹಸ್ಸಿ ಬಿ ಮೈಕಲ್ ಕ್ಲಾರ್ಕ್  80
ವಿ.ವಿ.ಎಸ್.ಲಕ್ಷ್ಮಣ್ ಬಿ ಬೆನ್ ಹಿಲ್ಫೆನ್ಹಾಸ್  66
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಜೇಮ್ಸ ಪ್ಯಾಟಿನ್‌ಸನ್  09
ಮಹೇಂದ್ರ ಸಿಂಗ್ ದೋನಿ ಸಿ ಅಂಡ್ ಬಿ ಬೆನ್ ಹಿಲ್ಫೆನ್ಹಾಸ್  02
ಆರ್.ಅಶ್ವಿನ್ ಸಿ ನೇಥನ್ ಲಿಯೋನ್ ಬಿ ಬೆನ್ ಹಿಲ್ಫೆನ್ಹಾಸ್  62
ಜಹೀರ್ ಖಾನ್ ಸಿ ಶಾನ್ ಮಾರ್ಷ್ ಬಿ ಪೀಟರ್ ಸಿಡ್ಲ್  35
ಇಶಾಂತ್ ಶರ್ಮ ಎಲ್‌ಬಿಡಬ್ಲ್ಯು ಬಿ ನೇಥನ್ ಲಿಯೋನ್  11
ಉಮೇಶ್ ಯಾದವ್ ಔಟಾಗದೆ  00
ಇತರೆ: (ಬೈ-6, ಲೆಗ್‌ಬೈ-3, ವೈಡ್-2, ನೋಬಾಲ್-8)  19
ವಿಕೆಟ್ ಪತನ: 1-18 (ಸೆಹ್ವಾಗ್; 3.3); 2-100 (ದ್ರಾವಿಡ್; 26.3); 3-168 (ಗಂಭೀರ್; 48.2); 4-271 (ತೆಂಡೂಲ್ಕರ್; 78.2); 5-276 (ಲಕ್ಷ್ಮಣ್; 82.1); 6-286 (ದೋನಿ; 84.3); 7-286 (ಕೊಹ್ಲಿ; 85.5); 8-342 (ಜಹೀರ್; 93.5); 9-384 (ಇಶಾಂತ್; 105.1); 10-400 (ಅಶ್ವಿನ್; 110.5)
ಬೌಲಿಂಗ್: ಜೇಮ್ಸ ಪ್ಯಾಟಿನ್‌ಸನ್ 23-4-106-1 (ನೋಬಾಲ್-3, ವೈಡ್-1), ಬೆನ್ ಹಿಲ್ಫೆನ್ಹಾಸ್ 32.5-8-106-5 (ವೈಡ್-1), ಪೀಟರ್ ಸಿಡ್ಲ್ 24-8-88-2 (ನೋಬಾಲ್-1), ನೇಥನ್ ಲಿಯೋನ್ 20-2-64-1, ಮೈಕಲ್ ಕ್ಲಾರ್ಕ್ 9-0-22-1, ಮೈಕ್ ಹಸ್ಸಿ 2-0-5-0

ADVERTISEMENT

ಫಲಿತಾಂಶ: ಆಸ್ಟ್ರೇಲಿಯಾಕ್ಕೆ ಇನಿಂಗ್ಸ್ ಹಾಗೂ 68 ರನ್‌ಗಳ ಜಯ. 4 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ. ಪಂದ್ಯಶ್ರೇಷ್ಠ: ಮೈಕಲ್ ಕ್ಲಾರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.