ADVERTISEMENT

ಸಿಡ್ನಿ ಕ್ರೀಡಾಂಗಣದ ತುಂಬಾ ನಸುಗೆಂಪು

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST
ಸಿಡ್ನಿ ಕ್ರೀಡಾಂಗಣದ ತುಂಬಾ ನಸುಗೆಂಪು
ಸಿಡ್ನಿ ಕ್ರೀಡಾಂಗಣದ ತುಂಬಾ ನಸುಗೆಂಪು   

ಸಿಡ್ನಿ: ಐತಿಹಾಸಿಕ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣ ಗುರುವಾರ ಬಹುತೇಕ ನಸುಗೆಂಪು ಬಣ್ಣಕ್ಕೆ ತಿರುಗಿತ್ತು. ಪ್ರತಿ ಬಾರಿ ಇಲ್ಲಿ ಟೆಸ್ಟ್ ನಡೆದಾಗ ಈ ರೀತಿ ಈ ಕ್ರೀಡಾಂಗಣವನ್ನು ಶೃಂಗರಿಸಲಾಗುತ್ತದೆ. ಇದಕ್ಕೆ `ಪಿಂಕ್ ಸ್ಟಂಪ್ ಡೇ~ ಎಂದು ಕರೆಯುತ್ತಾರೆ. ಅದಕ್ಕೆ ಒಂದು ಪ್ರತ್ಯೇಕ ಗ್ಯಾಲರಿ ಕೂಡ ಇಲ್ಲಿದೆ.

ಇದಕ್ಕೆ ಕಾರಣವಿದೆ. ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾ ಅವರ ಮೊದಲ ಪತ್ನಿ ಜೇನ್ ಮೆಕ್‌ಗ್ರಾ 2008ರಲ್ಲಿ ಸ್ತನ ಕ್ಯಾನ್ಸರ್‌ದಿಂದ ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಮೆಕ್‌ಗ್ರಾ ಒಂದು ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಇದರ ಮೂಲಕ ಸ್ತನ ಕ್ಯಾನ್ಸರ್ ಪೀಡಿತರಿಗೆ ನೆರವಾಗುತ್ತಿದ್ದಾರೆ.

ಆಸ್ಟ್ರೇಲಿಯಾ-ಭಾರತ ನಡುವಿನ ಟೆಸ್ಟ್ ಪಂದ್ಯದ ವೇಳೆ `ನಸುಗೆಂಪು~ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರು ಕೂಡ ಅದೇ ಬಣ್ಣದ ಬಟ್ಟೆ ಧರಿಸಿದ್ದರು. ಕೆಲ ಮಾಜಿ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಇದೇ ಬಣ್ಣದ ಬಟ್ಟೆ ತೊಟ್ಟಿದ್ದು ಕಂಡುಬಂತು.

ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನ ಈ ರೀತಿಯ ವಾತಾವರಣ ನಿರ್ಮಾಣವಾಗುತ್ತದೆ. ಈ ದಿನ ಒಂದು ಮಿಲಿಯನ್ ಡಾಲರ್‌ಗೂ ಅಧಿಕ ಹಣ ಸಂಗ್ರಹಿಲಾಗುತ್ತದೆ. ಇದಕ್ಕೆ ಕ್ರಿಕೆಟಿಗರೂ ನೆರವು ನೀಡುತ್ತಿದ್ದಾರೆ. ಈ ದಿನ ನಸುಗೆಂಪು ಬಣ್ಣದ ವಿಕೆಟ್ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಮೆಕ್‌ಗ್ರಾ ಕೂಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.