ADVERTISEMENT

ಸೀಮಾಗೆ ಬೆಳ್ಳಿ; ನವಜೀತ್‌ಗೆ ಕಂಚು

ಪಿಟಿಐ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ಡಿಸ್ಕಸ್‌ ಥ್ರೋದಲ್ಲಿ ಬೆಳ್ಳಿ ಗೆದ್ದ ಸೀಮಾ ಪೂನಿಯಾ ಅವರ ಎಸೆತದ ಶೈಲಿ ಎಎಫ್‌ಪಿ ಚಿತ್ರ
ಡಿಸ್ಕಸ್‌ ಥ್ರೋದಲ್ಲಿ ಬೆಳ್ಳಿ ಗೆದ್ದ ಸೀಮಾ ಪೂನಿಯಾ ಅವರ ಎಸೆತದ ಶೈಲಿ ಎಎಫ್‌ಪಿ ಚಿತ್ರ   

ಗೋಲ್ಡ್ ಕೋಸ್ಟ್‌: ಡಿಸ್ಕಸ್‌ ಅಥ್ಲೀಟ್‌ಗಳಾದ ಸೀಮಾ ಪೂನಿಯಾ ಮತ್ತು ನವಜೀತ್‌ ಕೌರ್ ಧಿಲಾನ್ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕದ ಬೇಟೆ ಆರಂಭಿಸಿದರು.

ಗುರುವಾರ ನಡೆದ ಸ್ಪರ್ಧೆಯಲ್ಲಿ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಸೀಮಾಗೆ ಇದು ಕಾಮನ್‌ವೆಲ್ತ್‌ ಕೂಟದಲ್ಲಿ ಒಟ್ಟಾರೆ ನಿರಂತರ ನಾಲ್ಕನೇ ಪದಕವಾಗಿದ್ದು ಧಿಲಾನ್‌ ಚೊಚ್ಚಲ ಕೂಟದಲ್ಲಿ ಪದಕ ಗೆದ್ದ ಸಂಭ್ರಮದಲ್ಲಿ ಮಿಂದರು.

ಪೂನಿಯಾ 60.41 ಮೀಟರ್‌ ದೂರ ಎಸೆದರೆ ಧಿಲಾನ್‌ 57.43 ಮೀಟರ್ ಎಸೆದರು. ಆಸ್ಟ್ರೇಲಿಯಾದ ಡ್ಯಾನಿ ಸ್ಟೀವನ್ಸ್ 68.26 ಮೀಟರ್ ದೂರದ ಸಾಧನೆ ಮಾಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ಕೂಟ ದಾಖಲೆಯನ್ನೂ ನಿರ್ಮಿಸಿದರು.

ADVERTISEMENT

(ಡಿಸ್ಕಸ್‌ ಥ್ರೋದಲ್ಲಿ ಬೆಳ್ಳಿ ಗೆದ್ದ ಸೀಮಾ ಪೂನಿಯಾ ಮತ್ತು ಕಂಚು ಗೆದ್ದ ನವಜೀತ್ ಧಿಲಾನ್‌ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು ಪಿಟಿಐ ಚಿತ್ರ)

ಸೀಮಾ ಎರಡನೇ ಪ್ರಯತ್ನದಲ್ಲಿ 59.57 ಮೀಟರ್ಸ್ ದೂರ ಎಸೆದಿದ್ದರು. ಆದರೆ ಮೂರನೇ ಮತ್ತು ಐದನೇ ಪ್ರಯತ್ನದಲ್ಲಿ ವೈಫಲ್ಯ ಕಂಡರು. ಕೊನೆಯ ಪ್ರಯತ್ನದಲ್ಲಿ 58.90 ಮೀಟರ್ ಸಾಧನೆ ಮಾಡಿದ್ದರು. ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದ ಧಿಲಾನ್‌ ಅಂತಿಮ ಸುತ್ತು ವರೆಗೂ ನಾಲ್ಕನೇ ಸ್ಥಾನದಲ್ಲಿದ್ದರು. ಕೊನೆಯಲ್ಲಿ ನ್ಯೂಜಿಲೆಂಡ್‌ನ ಸೊಸಿಟಿನಾ ಹಕೇ ಅವರನ್ನು ಹಿಂದಿಕ್ಕಿ ಕಂಚು ಗೆದ್ದರು.

ಕೋಚ್‌ ಇಲ್ಲದೆ ತರಬೇತಿ: ‘ಕೋಚ್‌ ಇಲ್ಲದೇ ತರಬೇತಿ ನಡೆಸಿ ಇಲ್ಲಿಗೆ ಬಂದಿದ್ದೆವು. ಆದರೂ ಪದಕ ಗೆದ್ದಿದ್ದೇವೆ’ ಎಂದು ಪೂನಿಯಾ ಹೇಳಿದರು.

ಫೈನಲ್‌ಗೆ ಅರ್ಪಿಂದರ್‌ ಸಿಂಗ್‌, ರಾಕೇಶ್: ಟ್ರಿಪಲ್ ಜಂಪ್‌ನಲ್ಲಿ ಭಾರತದ ಅರ್ಪಿಂದರ್ ಸಿಂಗ್ ಮತ್ತು ಎ.ವಿ.ರಾಕೇಶ್‌ ಬಾಬು ಫೈನಲ್‌ಗೆ ಲಗ್ಗೆ ಇಟ್ಟರು. ಆದರೆ ಲಾಂಗ್ ಜಂಪ್‌ನಲ್ಲಿ ಭರವಸೆ ಮೂಡಿಸಿದ್ದ ನಯನಾ ಜೇಮ್ಸ್ ಮತ್ತು ನೀನಾ ವರ್ಕಿಲ್‌ ನಿರಾಸೆ ಅನುಭವಿಸಿದರು. ಫೈನಲ್‌ನಲ್ಲಿ ಅವರು ಕೊನೆಯವರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.