ADVERTISEMENT

ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಬಿಸಿಸಿಐ ಸಭೆಗೂ ಮುನ್ನ ಮೋದಿ ಕೊನೆಯ ಪ್ರಯತ್ನವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಸಭೆಗೆ ತಡೆಯಾಜ್ಞೆ ನೀಡುವಂತೆ ಅವರು ಕೋರಿದ್ದರು. ಸಭೆ ನಡೆಸಲು ಅನುವು ಮಾಡಿಕೊಟ್ಟಿದ್ದ ದೆಹಲಿ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿದ್ದರು.

ಆದರೆ ‘ಇದು ಮಂಡಳಿಯ ಆಂತರಿಕ ವಿಚಾರ’ ಎಂದು ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಲು ನಿರಾಕರಿಸಿತು.
‘ವಿಶೇಷ ಮಹಾಸಭೆಗೆ ಹಾಜರಾಗಿ ಆರೋಪಗಳಿಗೆ ಉತ್ತರ ನೀಡುವಂತೆ’ ನ್ಯಾಯಮೂರ್ತಿಗಳಾದ ಎಚ್‌.ಎಲ್‌.­ಗೋಖಲೆ ಹಾಗೂ ಜೆ.ಚೆಲಮೇಶ್ವರ್‌ ಅವರನ್ನೊಳಗೊಂಡ ಪೀಠ ಮೋದಿಗೆ ಸೂಚಿಸಿತು.

‘ಕ್ರಿಕೆಟ್‌ ಮಂಡಳಿ ಈಗ ಯಾವುದೇ ಅಧ್ಯಕ್ಷರನ್ನು  ಹೊಂದಿಲ್ಲ. ಹಾಗಾಗಿ ಸಭೆಯನ್ನು ನಡೆಸದಂತೆ ತಡೆಯಾಜ್ಞೆ ನೀಡಬೇಕು’ ಎಂದು ಮೋದಿ ಪರ ಮತ್ತೊಬ್ಬ ವಕೀಲ ಅಭಿಷೇಕ್‌ ಮನು ಸಿಂಗ್ವಿ ವಾದಿಸಿದರು.

ಆದರೆ ಇದನ್ನು ನ್ಯಾಯಾಲಯ ಒಪ್ಪಲಿಲ್ಲ. ‘ಇದು  ಮಂಡಳಿಯ ಆಂತರಿಕ ವ್ಯವಹಾರ. ಈ ವಿಷಯದಲ್ಲಿ ನಾವು ತಲೆಹಾಕುವುದಿಲ್ಲ’ ಎಂದು ಪೀಠ ಹೇಳಿತು.

ಅಷ್ಟು ಮಾತ್ರವಲ್ಲದೇ, ಸಭೆ ತೆಗೆದುಕೊಂಡ ನಿರ್ಧಾರವನ್ನು ಮೋದಿ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದೂ ಅದು ತಿಳಿಸಿತು.
ಬಿಸಿಸಿಐಗೆ ಪತ್ರ ಬರೆದಿದ್ದ ಮೋದಿ: ಪ್ರಕರಣದ ವಿಚಾರಣೆ ನ್ಯಾಯಾಲಯ­ದಲ್ಲಿ ನಡೆಯುತ್ತಿರುವು­ದರಿಂದ ಸಭೆ­ಯನ್ನು ಮುಂದೂಡುವಂತೆ ಲಲಿತ್‌ ಮೋದಿ ಬುಧವಾರ ಬೆಳಿಗ್ಗೆ ಬಿಸಿಸಿಐಗೆ ಪತ್ರ ಬರೆದಿದ್ದರು. ಅಷ್ಟು ಮಾತ್ರವಲ್ಲದೇ, ಸಭೆಗೆ  ಹಾಜರಾಗುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. 

ಆದರೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಲು ನಿರಾಕರಿಸಿದ್ದು ಮಂಡಳಿಯ ಹಾದಿಯನ್ನು ಸುಗಮಗೊಳಿಸಿತು.

ನ್ಯಾಯಾಲಯ ಮೊರೆ
ಆಜೀವ ನಿಷೇಧ ಹೇರಿರುವ ಬಿಸಿಸಿಐ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಲಲಿತ್‌ ಮೋದಿ ಅವರ ವಕೀಲ ಮೆಹ್ಮೂದ್‌ ಅಬ್ದಿ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.