ADVERTISEMENT

ಸೂಕ್ತ ನಾಯಕತ್ವ ಬೇಕಿದೆ: ವಾಸೀಮ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಕರಾಚಿ (ಪಿಟಿಐ): ‘ಮುಂದಿನ ವರ್ಷ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ವೇಳೆ ಬಲಿಷ್ಠ ಪಾಕಿಸ್ತಾನ ತಂಡವನ್ನು ಕಟ್ಟಬೇಕಾದರೆ ಸೂಕ್ತ ಹಾಗೂ ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕಾದ ನಾಯಕನ ಅಗತ್ಯವಿದೆ’ ಎಂದು ಪಾಕ್ ತಂಡದ ಮಾಜಿ ನಾಯಕ ವಾಸೀಮ್‌ ಅಕ್ರಮ್‌ ಅಭಿಪ್ರಾಯಪಟ್ಟಿದ್ದಾರೆ.

‘ಈಗ ತಂಡವನ್ನು ಮುನ್ನಡೆಸುತ್ತಿರುವ ಮಿಸ್ಬಾ ಉಲ್ ಹಕ್‌ ಉತ್ತಮ ಪ್ರದರ್ಶನವನ್ನೇ ತೋರುತ್ತಿದ್ದಾರೆ. ಆದರೆ, ಪ್ರತಿ ಸಲವೂ ಒಂದೇ ರೀತಿಯ ಪರಿಸ್ಥಿತಿ ಇರುವುದಿಲ್ಲ. ಆದ್ದರಿಂದ ಆಕ್ರಮಣಕಾರಿಯಾದ ನಿರ್ಧಾರ ಕೈಗೊಳ್ಳುವ ನಾಯಕ ಬೇಕಿದೆ’ ಎಂದು ವಾಸೀಮ್‌ ನುಡಿದರು.

ವಿಶ್ವಕಪ್‌ ಟೂರ್ನಿಗೆ ಶಾಹಿದ್‌ ಅಫ್ರಿದಿ ಅವರನ್ನು ನಾಯಕರನ್ನಾಗಿ ನೇಮಕ ಮಾಡಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಚಿಂತಿಸುತ್ತಿದೆಯೇ ಎನ್ನುವ ಪ್ರಶ್ನೆಗೆ ‘ಅದು ಮಂಡಳಿಗೆ  ಬಿಟ್ಟ ವಿಚಾರ’ ಎಂದು ಪ್ರತಿಕ್ರಿಯಿಸಿದರು. ಜೊತೆಗೆ ಏಷ್ಯಾಕಪ್‌ನ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌್ ಮಾಡಲು ಮುಂದಾದ ಪಾಕ್‌ ತಂಡದ ನಿರ್ಧಾರ ತಪ್ಪಾಗಿತ್ತು. ಆದ್ದರಿಂದ ಸೋಲು ಎದುರಾಯಿತು ಎಂದೂ ಅವರು ಹೇಳಿದರು.

ಕೋಚ್‌ ಜವಾಬ್ದಾರಿ ಬೇಕಿಲ್ಲ: ‘ಪಾಕ್‌ ತಂಡಕ್ಕೆ ತರಬೇತುದಾರನಾಗಿ ಕೆಲಸ ಮಾಡುವ ಜವಾಬ್ದಾರಿ ನನಗೆ ಬೇಕಿಲ್ಲ. ಇಲ್ಲಿನ ತಂಡಕ್ಕೆ ತರಬೇತಿ ನೀಡುವುದು ಕಷ್ಟದ ಕೆಲಸ’ ಎಂದು ಮಾಜಿ ನಾಯಕ ಯೂನಿಸ್‌ ಖಾನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.