ADVERTISEMENT

ಸೂಪರ್ ಕಿಂಗ್ಸ್ ಕನಸು ಜೀವಂತ

​ಪ್ರಜಾವಾಣಿ ವಾರ್ತೆ
Published 12 ಮೇ 2012, 19:30 IST
Last Updated 12 ಮೇ 2012, 19:30 IST
ಸೂಪರ್ ಕಿಂಗ್ಸ್ ಕನಸು ಜೀವಂತ
ಸೂಪರ್ ಕಿಂಗ್ಸ್ ಕನಸು ಜೀವಂತ   

ಚೆನ್ನೈ (ಪಿಟಿಐ): ಅತಿಮಹತ್ವದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಭರ್ಜರಿ ಗೆಲುವು ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ `ಪ್ಲೇ ಆಫ್~ ಹಂತ ಪ್ರವೇಶಿಸುವ ಸಾಧ್ಯತೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ 9 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 114 ರನ್ ಗಳಿಸಿದರೆ, ಆತಿಥೇಯ ತಂಡ 15.2 ಓವರ್‌ಗಳಲ್ಲಿ 1 ವಿಕೆಟ್‌ಗೆ 115 ರನ್ ಗಳಿಸಿ ಜಯ ಪಡೆಯಿತು.

ಗೆಲುವು ಪಡೆದ ಕಾರಣ ಕಳೆದ ಬಾರಿಯ ಚಾಂಪಿಯನ್ನರು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರು. ಈ ಪಂದ್ಯದಲ್ಲಿ ಸೋಲು ಎದುರಾಗಿದ್ದಲ್ಲಿ, ಸೂಪರ್ ಕಿಂಗ್ಸ್ ತಂಡದ `ಪ್ಲೇ ಆಫ್~ ಕನಸು ಅಸ್ತಮಿಸುವ ಸಾಧ್ಯತೆಯಿತ್ತು. ಸೋಲು ಅನುಭವಿಸಿದರೂ ಡೇರ್‌ಡೆವಿಲ್ಸ್ ತಂಡದ ಅಗ್ರಸ್ಥಾನಕ್ಕೆ ಯಾವುದೇ ಧಕ್ಕೆ ಉಂಟಾಗಲಿಲ್ಲ.

ಡೇರ್‌ಡೆವಿಲ್ಸ್ ತಂಡದ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದ ಬೆನ್ ಹಿಲ್ಫೆನಾಸ್ (27ಕ್ಕೆ3) ಅವರು ಸೂಪರ್ ಕಿಂಗ್ಸ್‌ನ ಗೆಲುವಿನ ರೂವಾರಿ ಎನಿಸಿದರು. ಟಾಸ್ ಗೆದ್ದ ದೋನಿ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಅವರ ಲೆಕ್ಕಾಚಾರ ಸರಿಯಾಗಿತ್ತು.

ಡೇವಿಡ್ ವಾರ್ನರ್ (8), ವೀರೇಂದ್ರ ಸೆಹ್ವಾಗ್ (4) ಮತ್ತು ನಮನ್ ಓಜಾ (3) ಮೊದಲ ಐದು ಓವರ್‌ಗಳಲ್ಲೇ ಪೆವಿಲಿಯನ್‌ಗೆ ಮರಳಿದರು. ಈ ಮೂರೂ ವಿಕೆಟ್ ಪಡೆದ ಹಿಲ್ಫೆನಾಸ್ ಡೇರ್‌ಡೆವಿಲ್ಸ್‌ಗೆ ಆಘಾತ ನೀಡಿದರು. ಇದರಿಂದ ಚೇತರಿಸಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಅಲ್ಬಿ ಮಾರ್ಕೆಲ್ ಅವರು ಮಾಹೇಲ ಜಯವರ್ಧನೆಗೆ (8) ಪೆವಿಲಿಯನ್ ಹಾದಿ ತೋರಿಸಿದ ಕಾರಣ ಡೇರ್‌ಡೆವಿಲ್ಸ್ ಅತೀವ ಒತ್ತಡಕ್ಕೆ ಒಳಗಾಯಿತು. ಯೋಗೇಶ್ ನಗರ್ (43, 47ಎಸೆತ, 1ಬೌಂಡರಿ, 1ಸಿಕ್ಸರ್) ತಾಳ್ಮೆಯ ಆಟದ ನೆರವಿನಿಂದ ತಂಡದ ಮೊತ್ತ ನೂರು ರನ್‌ಗಳ ಗಡಿ ದಾಟಿತು. ವೈ. ವೇಣುಗೋಪಾಲ್ ರಾವ್ (27, 24ಎಸೆತ, 2ಸಿಕ್ಸರ್) ಅವರು ಯೋಗೇಶ್‌ಗೆ ತಕ್ಕ ಸಾಥ್ ನೀಡಿದರು.

ಸುಲಭ ಗುರಿ ಮುಂದಿದ್ದ ಕಾರಣ ರನ್ ಬೆನ್ನಟ್ಟುವ ವೇಳೆ ಸೂಪರ್ ಕಿಂಗ್ಸ್ ಒತ್ತಡಕ್ಕೆ ಒಳಗಾಗಲೇ ಇಲ್ಲ. ಮೈಕ್ ಹಸ್ಸಿ (38, 32 ಎಸೆತ), ಮುರಳಿ ವಿಜಯ್ (ಅಜೇಯ 48, 40 ಎಸೆತ, 5 ಬೌಂ, 1 ಸಿಕ್ಸರ್) ಹಾಗೂ ಸುರೇಶ್ ರೈನಾ (ಅಜೇಯ 28, 20 ಎಸೆತ, 1 ಬೌಂ, 2 ಸಿಕ್ಸರ್) ಉತ್ತಮ ಆಟವಾಡಿ ತಂಡದ ಗೆಲುವಿಗೆ ನೆರವಾದರು.
ಹಸ್ಸಿ ಮತ್ತು ವಿಜಯ್ ಮೊದಲ ವಿಕೆಟ್‌ಗೆ 10.1 ಓವರ್‌ಗಳಲ್ಲಿ 75 ರನ್ ಸೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆ ಬಳಿಕ ವಿಜಯ್ ಹಾಗೂ ರೈನಾ ಮುರಿಯದ ಎರಡನೇ ವಿಕೆಟ್‌ಗೆ 40 ರನ್ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.