ADVERTISEMENT

ಸೆಮಿಗೆ ಲಗ್ಗೆ ಇಟ್ಟ ಡಾಮಿನಿಕ್‌ ಥೀಮ್‌

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಅಲೆಕ್ಸಾಂಡರ್‌ ಜ್ವೆರೆವ್‌ಗೆ ನಿರಾಸೆ

ಏಜೆನ್ಸೀಸ್
Published 5 ಜೂನ್ 2018, 20:15 IST
Last Updated 5 ಜೂನ್ 2018, 20:15 IST
ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ಆಟದ ವೈಖರಿ
ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ಆಟದ ವೈಖರಿ   

‍ಪ್ಯಾರಿಸ್‌: ಅಮೋಘ ಆಟ ಆಡಿದ ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಡಾಮಿನಿಕ್‌ 6–4, 6–2, 6–1ರಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರನ್ನು ಸೋಲಿಸಿದರು.

ಇದರೊಂದಿಗೆ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮೂರನೇ ಬಾರಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟ ಸಾಧನೆ ಮಾಡಿದರು.

ADVERTISEMENT

ಟೂರ್ನಿಯಲ್ಲಿ ಮೊದಲ ಬಾರಿಗೆ ಎಂಟರ ಘಟ್ಟ ಪ್ರವೇಶಿಸಿದ್ದ ಜ್ವೆರೆವ್‌ ಅವರು ಮೊದಲ್‌ ಸೆಟ್‌ನ ಆರಂಭದಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ಹೀಗಾಗಿ 4–4ರಲ್ಲಿ ಸಮಬಲವಾಗಿತ್ತು. ನಂತರ ಏಳನೇ ಶ್ರೇಯಾಂಕಿತ ಆಟಗಾರ ಡಾಮಿನಿಕ್‌ ಗುಣಮಟ್ಟದ ಆಟ ಆಡಿದರು. ಒಂಬತ್ತನೇ ಗೇಮ್‌ನಲ್ಲಿ ಸರ್ವ್‌ ಕಾಪಾಡಿಕೊಂಡ ಅವರು ಮರು ಗೇಮ್‌ನಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ ಜ್ವೆರೆವ್‌ ಅವರ ಸರ್ವ್‌ ಮುರಿದು ಸೆಟ್‌ ಕೈವಶ ಮಾಡಿಕೊಂಡರು.

ಎರಡನೇ ಸೆಟ್‌ನಲ್ಲಿ ಜ್ವೆರೆವ್‌ ತಿರುಗೇಟು ನೀಡಲಿದ್ದಾರೆ ಎಂಬ ನಿರೀಕ್ಷೆಯೂ ಹುಸಿಯಾಯಿತು. ಹಲವು ತಪ್ಪುಗಳನ್ನು ಮಾಡಿದ ಅವರು ಸುಲಭವಾಗಿ ಗೇಮ್‌ಗಳನ್ನು ಕೈಚೆಲ್ಲಿದರು. ಹೀಗಾಗಿ ಡಾಮಿನಿಕ್‌ 4–1ರ ಮುನ್ನಡೆ ಗಳಿಸಿ ಸೆಟ್‌ ಮೇಲಿನ ಹಿಡಿತ ಬಿಗಿ ಮಾಡಿಕೊಂಡರು. ನಂತರವೂ ಥೀಮ್‌ ಮೋಡಿ ಮಾಡಿದರು. ಗ್ರೌಂಡ್‌ಸ್ಟ್ರೋಕ್‌ಗಳ ಮೂಲಕ ಗೇಮ್‌ ಜಯಿಸಿದ ಅವರು ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು. ಈ ಸೆಟ್‌ನಲ್ಲಿ ಜ್ವೆರೆವ್‌ ಕೇವಲ ನಾಲ್ಕು ವಿನ್ನರ್‌ಗಳನ್ನು ಸಿಡಿಸಿದರು.

ಮೂರನೇ ಸೆಟ್‌ನಲ್ಲೂ ಡಾಮಿನಿಕ್‌ ಗರ್ಜಿಸಿದರು. ದೀರ್ಘ ರ‍್ಯಾಲಿಗಳನ್ನು ಆಡಿದ ಅವರು ಕ್ರಾಸ್‌ಕೋರ್ಟ್‌, ಬ್ಯಾಕ್‌ಹ್ಯಾಂಡ್‌ ಮತ್ತು ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ಇದರೊಂದಿಗೆ 4–0ರ ಮುನ್ನಡೆ ಗಳಿಸಿ ಗೆಲುವಿನ ಹಾದಿ ಸುಗಮ ಮಾಡಿಕೊಂಡರು. ನಂತರವೂ ಗುಣಮಟ್ಟದ ಆಟ ಆಡಿದ ಡಾಮಿನಿಕ್‌ ನಿರಾಯಾಸವಾಗಿ 21ರ ಹರೆಯದ ಜ್ವೆರೆವ್‌ ಅವರ ಸವಾಲು ಮೀರಿದರು.

ಸೆಮಿಗೆ ಕೀಸ್‌: ಅಮೆರಿಕದ ಆಟಗಾರ್ತಿ ಮ್ಯಾಡಿಸನ್‌ ಕೀಸ್‌ ಅವರು ಮೊದಲ ಬಾರಿಗೆ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ 13ನೇ ಶ್ರೇಯಾಂಕಿತ ಆಟಗಾರ್ತಿ ಕೀಸ್‌ 7–6, 6–4ರ ನೇರ ಸೆಟ್‌ಗಳಿಂದ ಕಜಕಸ್ತಾನದ ಯೂಲಿಯಾ ಪುಟಿನ್‌ತ್ಸೆವಾ ವಿರುದ್ಧ ಗೆದ್ದರು.

ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮೂರನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಮ್ಯಾಡಿಸನ್‌ ಮೊದಲ ಸೆಟ್‌ನಲ್ಲಿ 3–5ರಿಂದ ಹಿಂದಿದ್ದರು.

ನಂತರ ಗುಣಮಟ್ಟದ ಆಟ ಆಡಿದ ಅವರು ಸತತವಾಗಿ ಗೇಮ್ ಜಯಿಸಿದರು. ‘ಟ್ರೈ ಬ್ರೇಕರ್‌’ನಲ್ಲೂ ಅವರು ಮೋಡಿ ಮಾಡಿದರು. ಒತ್ತಡ ಮೀರಿನಿಂತ ಅವರು ಛಲದಿಂದ ಹೋರಾಡಿ ಸೆಟ್‌ ಜಯಿಸಿದರು.

ಫ್ರೆಂಚ್‌ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಕಜಕಸ್ತಾನದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆಯುವ ತವಕದಲ್ಲಿದ್ದ ಯೂಲಿಯಾ ಎರಡನೇ ಸೆಟ್‌ನಲ್ಲಿ ಉತ್ತಮ ಆರಂಭ ಕಂಡರು.

ಮೊದಲ ಗೇಮ್‌ನಲ್ಲಿ ಸರ್ವ್‌ ಕಾಪಾಡಿಕೊಂಡ ಅವರು ಎರಡನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು 2–0ರ ಮುನ್ನಡೆ ಗಳಿಸಿದರು. ನಂತರ ದೀರ್ಘ ರ‍್ಯಾಲಿಗಳನ್ನು ಆಡಿದ ಕೀಸ್‌ ಸುಲಭವಾಗಿ ಗೇಮ್‌ ಜಯಿಸಿ 4–3ರ ಮುನ್ನಡೆ ತಮ್ಮದಾಗಿಸಿಕೊಂಡರು. ಎಂಟನೇ ಗೇಮ್‌ ಗೆದ್ದ ಯೂಲಿಯಾ 4–4ರಲ್ಲಿ ಸಮಬಲ ಮಾಡಿಕೊಂಡರು.  ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು. ನಿರ್ಣಾಯಕ ಎನಿಸಿದ್ದ ಕೊನೆಯ ಎರಡು ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆದ ಕೀಸ್‌ ಸಂಭ್ರಮಿಸಿದರು.

ಪುರುಷರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರಿಯಾದ ಒಲಿವರ್‌ ಮರಾಕ್‌ ಮತ್ತು ಕ್ರೊವೇಷ್ಯಾದ ಮೆಟ್‌ ಪೆವಿಕ್‌ 3–6, 6–4, 6–3ರಲ್ಲಿ ಕೊಲಂಬಿಯಾದ ವುವಾನ್‌ ಸೆಬಾಸ್ಟಿಯನ್‌ ಕ್ಯಾಬಲ್‌ ಮತ್ತು ರಾಬರ್ಟ್‌ ಫರಾ ಅವರನ್ನು ಸೋಲಿಸಿದರು.

**

ಜ್ವೆರೆವ್‌ ‍ಪ್ರತಿಭಾನ್ವಿತ ಆಟಗಾರ. ಆರಂಭಿಕ ಸೆಟ್‌ನಲ್ಲಿ ಅವರು ಪ್ರಬಲ ಪೈಪೋಟಿ ಒಡ್ಡಿದರು. ನಂತರ ನಾನು ಗುಣಮಟ್ಟದ ಆಟ ಆಡಿ ಗೆದ್ದೆ.
– ಡಾಮಿನಿಕ್‌ ಥೀಮ್‌, ಆಸ್ಟ್ರಿಯಾದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.