ADVERTISEMENT

ಸೆಮಿಫೈನಲ್‌ಗೆ ವೀನಸ್

ಗಾಯಗೊಂಡ ಜೊಕೊವಿಚ್‌ಗೆ ಜಯ

ಏಜೆನ್ಸೀಸ್
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ವೀನಸ್‌ ವಿಲಿಯಮ್ಸ್‌ ಚೆಂಡನ್ನು ರಿಟರ್ನ್‌ ಮಾಡಲು ಮುಂದಾದ ಕ್ಷಣ
ವೀನಸ್‌ ವಿಲಿಯಮ್ಸ್‌ ಚೆಂಡನ್ನು ರಿಟರ್ನ್‌ ಮಾಡಲು ಮುಂದಾದ ಕ್ಷಣ   

ಲಂಡನ್ (ಎಎಫ್‌ಪಿ): ಫ್ರೆಂಚ್ ಓಪನ್ ಗೆದ್ದುಕೊಂಡಿದ್ದ ಜೆಲೆನಾ ಓಸ್ತಪೆಂಕೊಗೆ ಸೋಲುಣಿಸಿದ ವೀನಸ್ ವಿಲಿಯಮ್ಸ್‌ ಹಾಗೂ ಸ್ವೆಟಲಾನ ಎದುರು ಗೆದ್ದ ಗಾರ್ಬೈನ್ ಮುಗುರುಜಾ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮಂಗಳವಾರ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಐದು ಬಾರಿ ವಿಂಬಲ್ಡನ್ ಗೆದ್ದು ಕೊಂಡಿರುವ ಅಮೆರಿಕದ ವೀನಸ್ ವಿಲಿ ಯಮ್ಸ್ ಮತ್ತೊಮ್ಮೆ ಇಲ್ಲಿ ತಮ್ಮ ಪ್ರಾಬಲ್ಯ ಮೆರೆಯುವಲ್ಲಿ ಸಫಲರಾಗಿದ್ದಾರೆ.
73 ನಿಮಿಷದ ಕ್ವಾರ್ಟರ್‌ಫೈನಲ್ ಪೈಪೋಟಿಯಲ್ಲಿ ವೀನಸ್‌ 6–3, 7–5ರ ನೇರ ಸೆಟ್‌ನಲ್ಲಿ ಜಯ ದಾಖಲಿಸಿದರು.

ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಪಡೆದ ವೀನಸ್‌ ಎರಡನೇ ಸೆಟ್‌ನಲ್ಲಿ ತೀವ್ರ ಪೈಪೋಟಿ ಎದುರಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಈ ಆಟಗಾರ್ತಿ 2008ರ ಬಳಿಕ ಇಲ್ಲಿ ಪ್ರಶಸ್ತಿ ಗೆದ್ದಿಲ್ಲ.

ADVERTISEMENT

ಮಂಗಳವಾರ ಇಲ್ಲಿನ ಆಲ್‌ ಇಂಗ್ಲೆಂಡ್ ಕ್ಲಬ್‌ನಲ್ಲಿ ವೀನಸ್‌ ತಮ್ಮ 100ನೇ ಸಿಂಗಲ್ಸ್ ಪಂದ್ಯ ಆಡಿದರು. 

ಸತತ ಹನ್ನೊಂದು ಪಂದ್ಯಗಳಲ್ಲಿ ಸೋಲಿಲ್ಲದೇ ಆಡಿದ್ದ ಓಸ್ತಪೆಂಕೊಗೆ ವೀನಸ್ ಎದುರು ಸೋಲು ಎದುರಾಗಿದೆ.

ಮುಗುರುಜಾಗೆ ಜಯ:  ಎರಡನೇ ಬಾರಿ ವಿಂಬಲ್ಡನ್‌ನಲ್ಲಿ ಸೆಮಿಫೈನಲ್ ತಲುಪಿ ರುವ ಮುಗುರುಜಾ ಕ್ವಾರ್ಟರ್‌ಫೈನಲ್‌ ನಲ್ಲಿ 6–3, 6–4ರಲ್ಲಿ ರಷ್ಯಾದ ಏಳನೇ ಶ್ರೇಯಾಂಕದ ಆಟಗಾರ್ತಿ ಜುಜೆನೆಟ್ಸೊವಾ ಸ್ವೆಟಲಾನ ಅವರನ್ನು ಮಣಿಸಿದರು. ಹೋದ ವರ್ಷ ಫ್ರೆಂಚ್ ಓಪನ್ ಗೆದ್ದ ಬಳಿಕ ಮುಗುರುಜಾ ಯಾವುದೇ ಮಹತ್ವದ ಟೂರ್ನಿಗಳಲ್ಲಿ ಸೆಮಿಫೈನಲ್ ತಲುಪಿಲ್ಲ.

2015ರ ಫೈನಲ್‌ನಲ್ಲಿ ಇಲ್ಲಿ ಮುಗು ರುಜಾ ಅವರು ಸೆರೆನಾ ವಿಲಿಯಮ್ಸ್ ಎದುರು ಸೋಲು ಕಂಡಿದ್ದರು.

ಜೊಕೊವಿಚ್‌ಗೆ ಗಾಯ: ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ 6–2, 7–6, 6–4ರಲ್ಲಿ ಫ್ರಾನ್ಸ್‌ನ ಅಡಿರಿಯಾನ್ ಮುನ್ನಾರಿನೊ ಮೇಲೆ ಜಯದಾಖಲಿಸಿದರು.

ಈ ಗೆಲುವಿನಿಂದ ಒಂಬತ್ತನೇ ಬಾರಿ ಅವರು ಇಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಪಂದ್ಯದ ಐದನೇ ಗೇಮ್‌ನ ಮೂರನೇ ಸೆಟ್‌ ವೇಳೆ ಜೊಕೊವಿಚ್ ಬಲ ಭುಜದ ಗಾಯಕ್ಕೆ ಒಳಗಾದರು. ಎರಡನೇ ಶ್ರೇಯಾಂಕದ ಆಟಗಾರ ಚಿಕಿತ್ಸೆ ಪಡೆದ ಬಳಿಕ ಮತ್ತೆ ಅಂಗಳಕ್ಕೆ ಇಳಿದು ಆಡಿದರು.

ಜೊಕೊವಿಚ್ ಆರೋಪ: ‘ಕೋರ್ಟ್‌ನ ಸರ್ವಿಸ್‌ ಲೇನ್ ಬಳಿ ರಂಧ್ರ ಕಂಡು ಬಂದಿತ್ತು. ಪಂದ್ಯಕ್ಕೂ ಮೊದಲು ನಾನು ಇದನ್ನು  ಚೇರ್ ಅಂಪೈರ್ ಗಮನಕ್ಕೆ ತಂದಿದ್ದೆ. ಆದರೆ ಅವರು ಯಾವುದೇ ಕ್ರಮಕ್ಕೂ ಮುಂದಾಗಲಿಲ್ಲ’ ಎಂದು 30 ವರ್ಷದ ಆಟಗಾರ ಜೊಕೊವಿಚ್ ಆರೋಪಿಸಿದ್ದಾರೆ.

‘ಈ ವರ್ಷ ಕೋರ್ಟ್‌ ನಿರ್ವಹಣೆ ಉತ್ತಮವಾಗಿಲ್ಲ. ಇದೇ ಅಭಿಪ್ರಾಯ ವನ್ನು ಬೇರೆ ಆಟಗಾರರು ಕೂಡ ವ್ಯಕ್ತ ಪಡಿಸಿದ್ದಾರೆ’ ಎಂದು   ಹೇಳಿದ್ದಾರೆ.
ಬುಧವಾರದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಜೊಕೊವಿಚ್,  ಥಾಮಸ್ ಬೆರ್ಡಿಕ್ ವಿರುದ್ಧ ಆಡಲಿದ್ದಾರೆ.

ನಡಾಲ್‌ಗೆ ಆಘಾತ: ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ರಫೆಲ್ ನಡಾಲ್‌ಗೆ ಸೋಲು ಎದುರಾಗಿದೆ.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್ 3–6, 4–6, 6–3, 6–4, 13–15ರಲ್ಲಿ ಲೂಕ್ಸೆನ್‌ಬರ್ಗ್‌ನ ಗಿಲ್ಲೆಸ್ ಮುಲ್ಲರ್ ಎದುರು ಆಘಾತ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.