ADVERTISEMENT

ಸೆಮಿಫೈನಲ್‌ಗೆ ಇಂಗ್ಲೆಂಡ್ ತಂಡ

ವಿಲಿಮ್ಸನ್ ಹೋರಾಟ ವ್ಯರ್ಥ, ನ್ಯೂಜಿಲೆಂಡ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ಕಾರ್ಡಿಫ್ (ಪಿಟಿಐ): ಅಲಸ್ಟೇರ್ ಕುಕ್ (64) ಮತ್ತು ಜೋ ರೂಟ್ ತೋರಿದ ಉತ್ತಮ ಆಟದ ಬಲದಿಂದ ಇಂಗ್ಲೆಂಡ್ ತಂಡ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 10 ರನ್‌ಗಳ ಗೆಲುವು ಸಾಧಿಸುವುದರ ಜೊತೆಗೆ `ಎ' ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿತು.

ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 23.3 ಓವರ್‌ಗಳಲ್ಲಿ 169 ರನ್‌ಗಳಿಗೆ ಆಲೌಟಾಯಿತು. ಈ ಕಠಿಣ ಗುರಿಯನ್ನು ಬೆನ್ನಟ್ಟುವ ಹಾದಿಯಲ್ಲಿ ದಿಟ್ಟ ಹೋರಾಟ ತೋರಿದ ಕಿವೀಸ್ 24 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು.

ಮಳೆ ಕಾಟ: ಇಲ್ಲಿ ಸತತ ಮಳೆ ಸುರಿದ ಕಾರಣ ಪಂದ್ಯ ತಡವಾಗಿ ಆರಂಭವಾಯಿತು. ಇದರಿಂದ 24 ಓವರ್‌ಗಳ ಪಂದ್ಯ ನಡೆಸಲು ನಿರ್ಧರಿಸಲಾಯಿತು. ಒಂದು ರೀತಿಯಲ್ಲಿ ಟ್ವೆಂಟಿ-20 ಹೋರಾಟದಂತೆ ಕಂಡುಬಂದ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಉತ್ತಮ ಆರಂಭ ಲಭಿಸಲಿಲ್ಲ. ತಂಡದ ಮೊತ್ತ 25 ಆಗುವಷ್ಟರಲ್ಲಿ ಇಯಾನ್ ಬೆಲ್ (10) ಮತ್ತು ಜೊನಾಥನ್ ಟ್ರಾಟ್ (8) ಪೆವಿಲಿಯನ್‌ಗೆ ಮರಳಿದರು. ಆದರೆ ನಾಯಕ ಕುಕ್ ಮತ್ತು ಜೋ ರೂಟ್ (38, 40 ಎಸೆತ) ತಂಡದ ನೆರವಿಗೆ ನಿಂತರು.

ಇವರಿಬ್ಬರು ಮೂರನೇ ವಿಕೆಟ್‌ಗೆ 75 ರನ್‌ಗಳನ್ನು ಸೇರಿಸಿದರು. 47 ಎಸೆತಗಳನ್ನು ಎದುರಿಸಿದ ಕುಕ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ನ್ಯೂಜಿಲೆಂಡ್ ತಂಡವನ್ನು ಗೆಲುವಿನ ದಡ ಸೇರಿಸಲು ಕೇನ್ ವಿಲಿಮ್ಸನ್ (67, 54ಎಸೆತ, 8ಬೌಂಡರಿ, 1 ಸಿಕ್ಸರ್) ನಡೆಸಿದ ಹೋರಾಟ ವ್ಯರ್ಥವಾಯಿತು. ವಿಲಿಮ್ಸನ್ ಅವರನ್ನು ಹೊರತು ಪಡಿಸಿದರೆ, ಮಾರ್ಟಿನ್ ಗುಪ್ಟಿಲ್ (9), ಲೂಕ್ ರೋಂಚಿ (2) ಎರಡಂಕಿಯ ಮೊತ್ತ ಮುಟ್ಟಲಿಲ್ಲ.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 23.3 ಓವರ್‌ಗಳಲ್ಲಿ 169 (ಅಲಸ್ಟೇರ್ ಕುಕ್ 64, ಜೋ ರೂಟ್ 38, ಎಯೊನ್ ಮಾರ್ಗನ್ 15, ಜಾಸ್ ಬಟ್ಲರ್ 14, ಕೈಲ್ ಮಿಲ್ಸ್ 30ಕ್ಕೆ 4, ಮಿಷೆಲ್ ಮೆಕ್ಲೆನಗಾನ್ 36ಕ್ಕೆ 3)
ನ್ಯೂಜಿಲೆಂಡ್ 24 ಓವರ್‌ಗಳಲ್ಲಿ 8 ವಿಕೆಟ್‌ಗೆ 159: ಮಾರ್ಟಿನ್ ಗುಪ್ಟಿಲ್ 9, ಕೇನ್ ವಿಲಿಮ್ಸನ್ 67, ಬ್ರೆಂಡನ್ ಮೆಕ್ಲಮ್ 8, ಜೆ. ಆ್ಯಂಡರ್ಸನ್ 30, ನಥಾನ್ ಮೆಕ್ಲಮ್ ಔಟಾಗದೆ 13; ಜೇಮ್ಸ ಆ್ಯಂಡರ್ಸನ್ 32ಕ್ಕೆ2, ಟಿಮ್ ಬ್ರೆಸ್ನಿನ್ 41ಕ್ಕೆ2, ರವಿ ಬೋಪಾರ 26ಕ್ಕೆ2). ಫಲಿತಾಂಶ: ಇಂಗ್ಲೆಂಡ್‌ಗೆ 10 ರನ್ ಗೆಲುವು. ಪಂದ್ಯ ಶ್ರೇಷ್ಠ: ಅಲಸ್ಟೇರ್ ಕುಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT