ADVERTISEMENT

ಸೆಮಿಫೈನಲ್‌ಗೆ ಕರ್ನಾಟಕ ತಂಡ

ಸೀನಿಯರ್ ರಾಷ್ಟ್ರೀಯ ಹಾಕಿ: ಮಣಿಪುರಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST

ಪುಣೆ (ಪಿಟಿಐ): ಗೆಲುವಿನ ಓಟ ಮುಂದುವರಿಸಿರುವ ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ಮೂರನೇ ಹಾಕಿ ಇಂಡಿಯಾ ಪುರುಷರ ಸೀನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಶನಿವಾರ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಕರ್ನಾಟಕ 4-2 ಗೋಲುಗಳಿಂದ ಮಣಿಪುರ ಎದುರು ಗೆಲುವು ಸಾಧಿಸಿತು.
ಮಣಿಪುರದ ಎದುರಿನ ಪಂದ್ಯದಲ್ಲಿ ಬಿ.ಎಸ್. ಬಿದ್ದಪ್ಪ 13ನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು.

ನಂತರ ನಿಕಿನ್ ತಿಮ್ಮಯ್ಯ (30ನೇ ನಿಮಿಷ), ಎಂ.ಬಿ. ಅಯ್ಯಪ್ಪ (41ನೇ ನಿ) ಮತ್ತು ಎಂ.ಜಿ. ಪೂಣಚ್ಚ (48ನೇ ನಿ.) ಗೋಲು ಗಳಿಸಿದರು. ಕರ್ನಾಟಕ ಬಲಿಷ್ಠ ಸರ್ವಿಸಸ್ ತಂಡವನ್ನು ಸೋಲಿಸಿ ಎಂಟರ ಘಟ್ಟ ತಲುಪಿತ್ತು.

ಕರ್ನಾಟಕದ ಜೊತೆಗೆ ಹರಿಯಾಣ, ಪಂಜಾಬ್ ಮತ್ತು ಏರ್ ಇಂಡಿಯಾ ತಂಡಗಳೂ ನಾಲ್ಕರ ಘಟ್ಟ ತಲುಪಿದವು. ಛತ್ರಪತಿ ಶಿವಾಜಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ 6-0 ಗೋಲುಗಳಿಂದ ಜಾಖರ್ಂಡ್ ಮೇಲೆ ಜಯ ಸಾಧಿಸಿತು.

ವಿಜಯಿ ತಂಡದ ಸರ್ವಜಿತ್ ಸಿಂಗ್ (19ನೇ ನಿ.), ಗುರ್ಜಿಂದರ್ ಸಿಂಗ್ (26ನೇ ನಿ.), ರವಿಪಾಲ್ ಸಿಂಗ್ (31ನೇ ನಿ.), ಇಂದರ್‌ಜಿತ್ ಸಿಂಗ್ (32ನೇ ನಿ.) ಮತ್ತು ದೀಪಕ್ ಠಾಕೂರ್ (58 ಹಾಗೂ 63ನೇ ನಿಮಿಷ) ಗೋಲು ಗಳಿಸಿದರು. ಪಂಜಾಬ್ ಸೆಮಿಫೈನಲ್‌ನಲ್ಲಿ ಕರ್ನಾಟಕವನ್ನು ಎದುರಿಸಲಿದೆ.

ಏರ್ ಇಂಡಿಯಾಗೆ ಗೆಲುವು: ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಏರ್ ಇಂಡಿಯಾ 5-4 ಗೋಲುಗಳಿಂದ ರೈಲ್ವೆಸ್ ಎದುರು ಜಯದ ನಗೆ ಬೀರಿತು.

ADVERTISEMENT

ಏರ್ ಇಂಡಿಯಾದ ಪ್ರಧಾನ್ ಸೋಮಣ್ಣ 6 ಹಾಗೂ 60ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿದರೆ, ವಿ.ಎಸ್. ವಿನಯ್ (21ನೇ ನಿ.), ಜೋಗ ಸಿಂಗ್ (32ನೇ ನಿ.) ಮತ್ತು ಅರ್ಜುನ್ ಹಾಲಪ್ಪ (35ನೇ ನಿ.) ಇನ್ನುಳಿದ ಗೋಲುಗಳನ್ನು ಕಲೆ ಹಾಕಿದರು.

ಹರಿಯಾಣ  ಕೂಡಾ 4-1 ಛತ್ತೀಸ್‌ಗಡ ತಂಡವನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು.ಸೆಮಿಫೈನಲ್ ವೇಳಾಪಟ್ಟಿ: ಕರ್ನಾಟಕ-ಪಂಜಾಬ್ ಮತ್ತು ಏರ್ ಇಂಡಿಯಾ-ಹರಿಯಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.