ADVERTISEMENT

ಸೆಮಿಫೈನಲ್‌ಗೆ ಪೇಸ್-ಭೂಪತಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2011, 19:30 IST
Last Updated 20 ಆಗಸ್ಟ್ 2011, 19:30 IST
ಸೆಮಿಫೈನಲ್‌ಗೆ ಪೇಸ್-ಭೂಪತಿ
ಸೆಮಿಫೈನಲ್‌ಗೆ ಪೇಸ್-ಭೂಪತಿ   

ಸಿನ್ಸಿನಾಟಿ, ಒಯಿವೊ (ಐಎಎನ್‌ಎಸ್): ಮೂರನೇ ಶ್ರೇಯಾಂಕದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಇಲ್ಲಿ ನಡೆಯುತ್ತಿರುವ ಸದರ್ನ್ ಮತ್ತು ವೆಸ್ಟರ್ನ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ಹಾಗೂ ರಡೆಕ್ ಸ್ಪೆಪನಿಕ್ ಅವರಿಂದ `ವಾಕ್ ಓವರ್~ ಪಡೆಯಿತು.

ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಿದ ಪೇಸ್ ಹಾಗೂ ಭೂಪತಿ ಜೋಡಿ ಇಲ್ಲಿ ಪ್ರಬಲ ಸವಾಲು ಎದುರಿಸಬೇಕಿದೆ. ಎಕೆಂದರೆ ಅಗ್ರ ಶ್ರೇಯಾಂಕ ಹೊಂದಿರುವ ಕಳೆದ ಬಾರಿಯ ಚಾಂಪಿಯನ್ ಅಮೆರಿಕದ ಮೈಕ್ ಹಾಗೂ ಬಾಬ್ ಬ್ರಯಾನ್ ಜೋಡಿಯ ಎದುರು ಸೆಣಸಾಡಬೇಕಿದೆ.

ಬ್ರಯಾನ್ ಸಹೋದರರು ಎಂಟರ ಘಟ್ಟದ ಪಂದ್ಯದಲ್ಲಿ 7-6, 7-6ರಲ್ಲಿ ಏಳನೇ ಶ್ರೇಯಾಂಕದ ಮೌರಿಸ್ ಫಿಸ್ಟೇನ್‌ಬರ್ಗ್ ಹಾಗೂ ಮಾರ್ಸಿನ್ ಮಾತ್ಕೊವೊಸ್ಕಿ ಅವರನ್ನು ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.

ಬೋಪಣ್ಣ-ಖುರೇಷಿಗೆ ನಿರಾಸೆ: ಇದೇ ಟೂರ್ನಿಯ ಪುರುಷರ  ವಿಭಾಗದ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ -ಹಕ್ ಖುರೇಷಿ ಜೋಡಿ ಎಂಟರಘಟ್ಟದ ಪಂದ್ಯದಲ್ಲಿ ಮುಗ್ಗರಿಸಿತು.

ಈ ಜೋಡಿ 3-6, 2-6ರಲ್ಲಿ ನಾಲ್ಕನೇ ಶ್ರೇಯಾಂಕದ ಫ್ರಾನ್ಸ್‌ನ ಮೈಕಲ್ ಲೊದ್ರಾ-ಸರ್ಬಿಯಾದ ನೀನಾದ್ ಜಿಮೊಂಜಿಕ್ ಎದುರು ಸೋಲು ಕಂಡಿತು. ಈ ಹೋರಾಟ 58 ನಿಮಿಷಗಳ ಕಾಲ ನಡೆಯಿತು.

ಎರಡು ಸೆಟ್‌ಗಳಲ್ಲಿ ಪ್ರಬಲ ಪ್ರತಿರೋಧ ತೋರುವಲ್ಲಿ ಬೋಪಣ್ಣ ಹಾಗೂ ಖುರೇಷಿ ವಿಫಲರಾದರು. ಹಾಗೆಯೇ ಸಾಕಷ್ಟು ಪಾಯಿಂಟ್‌ಗಳನ್ನು ಅನಗತ್ಯವಾಗಿ ಬಿಟ್ಟುಕೊಟ್ಟರು.

ಈ ಜೋಡಿ ಅರ್ಜಿಂಟೀನಾದ ಜುವಾನ್ ಇಗ್ನಾಸಿಯೊ ಚೇಲಾ-ಜುವಾನ್ ಮೊನಾಕೊ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.