ADVERTISEMENT

ಸೆಮಿಫೈನಲ್‌ಗೆ ಬಾಲಾಜಿ, ರಷ್ಮಿಕಾ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ಬೆಂಗಳೂರು: ಕರ್ನಾಟಕದ ರಷ್ಮಿಕಾ ರಾಜನ್ ಹಾಗೂ ತಮಿಳುನಾಡಿನ ಎಲ್.ಆರ್. ಬಾಲಾಜಿ ಎಐಟಿಎ ಡಾ. ಸಂಪತ್ ಲೋಗನಾಥನ್ ಸೀರಿಸ್ ಟೆನಿಸ್ ಚಾಂಪಿಯನ್‌ಷಿಪ್‌ನ  ಸಿಂಗಲ್ಸ್ ವಿಭಾಗದ 14 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಕೋರ್ಟ್‌ನಲ್ಲಿ ಬುಧವಾರ ನಡೆದ ಬಾಲಕಿಯರ ಕ್ವಾರ್ಟರ್ ಫೈನಲ್ ಸೆಣಸಾಟದಲ್ಲಿ ರಷ್ಮಿಕಾ 7-6, 6-2ರ ನೇರ ಸೆಟ್‌ಗಳಿಂದ ಕರ್ನಾಟಕದವರೇ ಆದ ಶಿವಾನಿ ಮಂಜಣ್ಣ ಅವರನ್ನು ಮಣಿಸಿ ನಾಲ್ಕರ ಘಟ್ಟ ತಲುಪಿದರು.

ಬಾಲಕರ ವಿಭಾಗದ ಸಿಂಗಲ್ಸ್‌ನ ಎಂಟರ ಘಟ್ಟದ ಪಂದ್ಯದಲ್ಲಿ ಬಾಲಾಜಿ 6-4, 6-2ರಲ್ಲಿ ಆಂಧ್ರಪ್ರದೇಶದ ಅಯಿನಿ ವಂಶಿಕೃಷ್ಣ ಎದುರು ಗೆಲುವು ಪಡೆದರು. ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಕರ್ನಾಟಕದ ಆದಿಲ್ ಕಲ್ಯಾಣ್‌ಪುರ್ 6-3, 6-1ರಲ್ಲಿ ಕರ್ನಾಟಕದವರೇ ಆದ ಸೂರ್ಯ ಇಳಂಗೋವನ್ ಮೇಲೂ, ರಾಹುಲ್ ಶಂಕರ್ 6-3, 7-5ರಲ್ಲಿ ರೋಹಿತ್ ನರಸಿಂಹನ್ ವಿರುದ್ಧವೂ ಗೆಲುವು ಪಡೆದರು.

ಬಾಲಕಿಯರ 16 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕದ ನಿಶಾ ಶೆಣೈ ನಿರಾಸೆ ಕಂಡರು. ಎಂಟರ ಘಟ್ಟದ ಪಂದ್ಯದಲ್ಲಿ ನಿಶಾ 1-6, 0-6ರಲ್ಲಿ ತಮಿಳುನಾಡಿನ ಪ್ರಗತಿ ನಟರಾಜ್ ಎದುರು ಪರಾಭವಗೊಂಡರು. ಅನಿರುದ್ಧ್‌ಗೆ ನಿರಾಸೆ: ಆತಿಥೇಯ ರಾಜ್ಯದ ಬಿ.ಎಸ್. ಅನಿರುದ್ಧ್ ಬಾಲಕರ 16 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ 4-6, 4-6ರಲ್ಲಿ ಅಗ್ರ ಶ್ರೇಯಾಂಕದ ಆಂಧ್ರಪ್ರದೇಶದ ಪಿ.ಸಿ. ಅನಿರುದ್ಧ್ ಎದುರು ನಿರಾಸೆ ಅನುಭವಿಸಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಅಭಿನವ್ ಸಂಜೀವ್ 6-0, 6-0ರಲ್ಲಿ ತಮಿಳುನಾಡಿನ ವಿ. ರೋಹಿತ್ ಮೇಲೂ, ಆಂಧ್ರಪ್ರದೇಶದ ತಾಕುದ್ದೀನ್ ಅಹಮದ್ 6-1, 6-2ರಲ್ಲಿ ತಮ್ಮ ರಾಜ್ಯದವರೇ ಆದ ಟಿ.ಎಸ್. ಜುಡೆ ಲಿಯಾಂಡರ್ ವಿರುದ್ಧವೂ, ಮಹಾರಾಷ್ಟ್ರದ ವಿ. ನಂದೀಶ್ ಮೆಹುಲ್ 6-3, 6-4ರಲ್ಲಿ ಸುಪ್ರನ್ ಪಾಠಕ್ ಮೇಲೂ ಗೆಲುವು ಸಾಧಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.