ಬೆಂಗಳೂರು: ಅನಿರ್ಬನ್ ಲಾಹಿರಿ ತೋರಿದ ಉತ್ತಮ ಪ್ರದರ್ಶನದ ನೆರವಿನಿಂದ ಪುರವಂಕರ ಬೆಂಗಳೂರು ತಂಡ ಇಲ್ಲಿ ನಡೆಯುತ್ತಿರುವ ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿತು.
ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಎರಡನೇ ದಿನವಾದ ಗುರುವಾರ ಲಾಹಿರಿ 66 ಸ್ಟ್ರೋಕ್‌ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಇದರಿಂದಾಗಿ ಬೆಂಗಳೂರು ತಂಡ (276) ಮೂರನೇ ಸ್ಥಾನ ಪಡೆದು ನಾಲ್ಕರಘಟ್ಟಕ್ಕೆ ಅರ್ಹತೆ ಗಳಿಸಿತು. ತಂಡದ ಇನ್ನೊಬ್ಬ ಸ್ಪರ್ಧಿ ಮಾನವ್ ಜೈನ್ 71 ಅವಕಾಶಗಳನ್ನು ಬಳಸಿಕೊಂಡರು.
ಶ್ರೀಲಂಕಾದ ಮಿಥುನ್ ಪೆರೇರಾ (65) ನಿಖರ ಆಟದ ಬಲದಿಂದ ನವರತ್ನ ಅಹಮದಾಬಾದ್ ತಂಡ (273) ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ವಿಕ್ರಾಂತ್ ಚೋಪ್ರಾ (68) ಅವರೂ ತಂಡದ ನೆರವಿಗೆ ನಿಂತರು.
ಲಂಕಾದ ಅನುರಾ ರೋಹನ (65) ಎರಡನೇ ದಿನವೂ ಪ್ರಭಾವಿ ಪ್ರದರ್ಶನ ನೀಡಿ ಚೆನ್ನೈ ತಂಡ (274) ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ತಂಡದ ಎಸ್‌ಎಸ್‌ಪಿ ಚೌರಾಸಿಯ 71 ಅವಕಾಶ ಬಳಸಿಕೊಂಡರು.
ಪ್ರಮುಖ ಆಟಗಾರರನ್ನು ಹೊಂದಿದ್ದರೂ ಶುಭ್‌ಕಾಮನ ನೋಯ್ಡಾ (ಜೀವ್ ಮಿಲ್ಖಾ ಸಿಂಗ್), 3ಸಿ ದೆಹಲಿ (ಶಿವ ಕಪೂರ್) ಮತ್ತು ಡಿಎಲ್‌ಎಫ್ ಗುಡಗಾಂವ್ (ಜ್ಯೋತಿ ರಾಂಧವ ಹಾಗೂ ಹಿಮ್ಮತ್ ರಾಯ್) ತಂಡಗಳು ನಾಲ್ಕರಘಟ್ಟ ಪ್ರವೇಶಿಸಲು ವಿಫಲವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.