ADVERTISEMENT

ಸೆಮಿಫೈನಲ್‌ಗೆ ಭಾರತ

ಏಷ್ಯಾಕಪ್‌ ಮಹಿಳಾ ಹಾಕಿ: ಮಿಂಚಿದ ಪೂನಮ್‌, ಚಾನು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST

ಕೌಲಾಲಂಪುರ (ಪಿಟಿಐ): ಶ್ರೇಷ್ಠ ಮಟ್ಟದ ಪ್ರದರ್ಶನ ತೋರಿದ ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಎಂಟನೇ ಏಷ್ಯಾಕಪ್‌ ಮಹಿಳಾ ಹಾಕಿ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಇಲ್ಲಿನ ಹಾಕಿ ನ್ಯಾಷನಲ್‌ ಕ್ರೀಡಾಂಗಣದಲ್ಲಿ ಮಂಗಳ­ವಾರ ನಡೆದ ‘ಎ’ ಗುಂಪಿನ ಮೂರನೇ ಪಂದ್ಯದಲ್ಲಿ ಭಾರತ 2–0 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸಿತು.

ವಿರಾಮದವರೆಗೆ ಯಾವುದೇ ಗೋಲು ಬಂದಿರಲಿಲ್ಲ. ಅದಕ್ಕೆ ಕಾರಣ ಮಲೇಷ್ಯಾ ತಂಡದ ರಕ್ಷಣಾ ಆಟಗಾರ್ತಿಯರು ಯಾವುದೇ ಅವಕಾಶ ನೀಡಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಭಾರತದವರು ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ಆವರಣದೊಳಗೆ ಲಗ್ಗೆ ಇಟ್ಟರು.

39ನೇ ನಿಮಿಷದಲ್ಲಿ ಪೂನಮ್‌ ರಾಣಿ ಚೆಂಡನ್ನು ಗುರಿ ಸೇರಿಸಿ 1–0 ಮುನ್ನಡೆ ತಂದುಕೊಟ್ಟರು. 46ನೇ ನಿಮಿಷದಲ್ಲಿ ಲಿಲಿ ಚಾನು ಗಳಿಸಿದ ಗೋಲು ಮುನ್ನಡೆಯನ್ನು 2–0ಗೆ ಹೆಚ್ಚಿಸಿತು. ಆ ಬಳಿಕ ಎಚ್ಚರಿಕೆಯ ಆಟಕ್ಕೆ ಮುಂದಾದರು. ಆತಿಥೇಯ ಮಲೇಷ್ಯಾ ತಂಡದವರು ನಡೆಸಿದ ಯಾವುದೇ ಪ್ರಯತ್ನ ಫಲಿಸಲಿಲ್ಲ.

ಈ ಟೂರ್ನಿಯಲ್ಲಿ ಹಾಂಕಾಂಗ್‌ ಎದುರು ಭರ್ಜರಿ ಗೆಲುವು ಸಾಧಿಸಿದ್ದ ಭಾರತದ ವನಿತೆಯರು ಚೀನಾ ಎದುರು ಪರಾಭವಗೊಂಡಿದ್ದರು. ಈಗ ಒಟ್ಟು ಆರು ಪಾಯಿಂಟ್‌ ಹೊಂದಿದ್ದಾರೆ. ಚೀನಾ (9 ಪಾಯಿಂಟ್ಸ್‌) ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಿತು.

ಭಾರತ ಗುರುವಾರ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಕೊರಿಯಾ ತಂಡವನ್ನು ಎದುರಿಸಲಿದೆ. ಇದು ಭಾರತದ ಪಾಲಿಗೆ ಕಠಿಣ ಪಂದ್ಯ. ಕೊರಿಯಾ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಚೀನಾದವರು ಜಪಾನ್‌ ಎದುರು ಆಡಲಿದ್ದಾರೆ.  ಭಾರತ ಎಂಟು ರಾಷ್ಟ್ರಗಳ ಈ ಟೂರ್ನಿಯಲ್ಲಿ ಚಾಂಪಿಯನ್‌ ಆದರೆ ಮಾತ್ರ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.