ADVERTISEMENT

ಸೆಮಿಫೈನಲ್‌ಗೆ ಮಂಗಳೂರು ತಂಡ

ಅಖಿಲ ಭಾರತ ಅಂತರ ವಿ.ವಿ. ಮಹಿಳಾ ಕೊಕ್ಕೊ

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST

ಮಂಗಳೂರು: ಅಮೋಘ ಪ್ರದರ್ಶನ ಮುಂದುವರಿಸಿರುವ ಆತಿಥೇಯ ಮಂಗಳೂರು ವಿಶ್ವವಿದ್ಯಾಲಯ ತಂಡದವರು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.

ಕೊಣಾಜಿಯ ಮೈದಾನದಲ್ಲಿ ಭಾನುವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಮಂಗಳೂರು ವಿವಿ 11–2 ಪಾಯಿಂಟ್‌ಗಳಿಂದ ಕೇರಳ ವಿವಿಯನ್ನು ಮಣಿಸಿತು. ವಿಜೇತ ತಂಡದ ಅನೂಪಾ, ಶ್ರುತಿ  ಹಾಗೂ ಕೆ.ದೀಕ್ಷಾ ಚಾಣಾಕ್ಷತನದ ಆಟವಾಡಿದರು. ಅನೂಪಾ ನಾಲ್ಕು ನಿಮಿಷ ಎದುರಾಳಿಯನ್ನು ಕಾಡಿದರು.

ಆತಿಥೇಯ ತಂಡದವರು ಲೀಗ್‌ ಹಂತದಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆದ್ದಿದ್ದರು. ಕೊನೆಯ ಲೀಗ್‌ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 8 ಪಾಯಿಂಟ್‌ಗಳಿಂದ ಹಿಮಾಚಲ ಪ್ರದೇಶ ತಂಡವನ್ನು ಸೋಲಿಸಿದ್ದರು. ಮಂಗಳೂರು ವಿವಿ ಸೋಮವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಪುಣೆ ವಿವಿ ಎದುರು ಪೈಪೋಟಿ ನಡೆಸಲಿದೆ.

ಆದರೆ ಮೈಸೂರು ವಿವಿ ತಂಡದವರು ನಿರಾಸೆಗೆ ಒಳಗಾದರು. ಈ ತಂಡದವರು ಎಂಟರ ಘಟ್ಟದ ಪಂದ್ಯದಲ್ಲಿ 5–15 ಪಾಯಿಂಟ್‌ಗಳಿಂದ ಕಲ್ಲಿಕೋಟೆ ವಿಶ್ವವಿದ್ಯಾಲಯ ಎದುರು ಪರಾಭವಗೊಂಡರು.  ಮೈಸೂರು ತಂಡದ ನೇತ್ರಾವತಿ ನಡೆಸಿದ ಪ್ರಯತ್ನ ಸಾಕಾಗಲಿಲ್ಲ. ಈ ತಂಡದವರು ತಮ್ಮ ಕೊನೆಯ ಲೀಗ್‌ ಪಂದ್ಯದಲ್ಲಿ 7–6 ಪಾಯಿಂಟ್‌ಗಳಿಂದ ಪಟಿಯಾಲದ ಪಂಜಾಬ್‌ ವಿವಿಯನ್ನು ಮಣಿಸಿದ್ದರು.

ಪುಣೆ ವಿವಿ ಹಾಗೂ ಮುಂಬೈ ವಿವಿ ತಂಡಗಳು ಕೂಡ ನಾಲ್ಕರ ಘಟ್ಟ ಪ್ರವೇಶಿಸಿವೆ. ಪುಣೆ ತಂಡದವರು ಕ್ವಾರ್ಟರ್‌ ಫೈನಲ್‌ನಲ್ಲಿ 11–6 ಪಾಯಿಂಟ್‌ಗಳಿಂದ ಅಮೃತಸರದ ಗುರುನಾನಕ್‌ ದೇವ್‌ ವಿವಿ ಎದುರು ಗೆದ್ದರು. ಮೂರು ನಿಮಿಷ ಎದುರಾಳಿಯನ್ನು ಕಾಡಿದ ವಿಜಯೀ ತಂಡದ ಗೌರಿ ಎರಡು ಪಾಯಿಂಟ್‌ ಕಲೆಹಾಕಿದರು.  ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಮುಂಬೈ ಇನಿಂಗ್ಸ್‌ ಹಾಗೂ 2 ಪಾಯಿಂಟ್‌ಗಳಿಂದ ಶಿವಾಜಿ ವಿವಿಯನ್ನು ಸೋಲಿಸಿತು.

ಸೋಮವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಕಲ್ಲಿಕೋಟೆ ವಿವಿ ಹಾಗೂ ಮುಂಬೈ ವಿವಿ ಮುಖಾಮುಖಿಯಾಗಲಿವೆ. ಮಧ್ಯಾಹ್ನ ಫೈನಲ್‌ ಪಂದ್ಯ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.