ADVERTISEMENT

ಸೆಮಿಫೈನಲ್‌ಗೆ ಸೆರೆನಾ, ಲೀ

ಅಮೆರಿಕ ಓಪನ್‌ ಟೆನಿಸ್‌: ಎಂಟರಘಟ್ಟಕ್ಕೆ ಜೊಕೊವಿಚ್‌, ಮರ್ರೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ನ್ಯೂಯಾರ್ಕ್ (ಎಎಫ್‌ಪಿ):  ಪಂದ್ಯದಿಂದ ಪಂದ್ಯಕ್ಕೆ ತಮ್ಮ ಪ್ರದರ್ಶನ ಮಟ್ಟವನ್ನು ಉತ್ತಮಪಡಿಸಿ­ಕೊಳ್ಳುತ್ತಿ­ರುವ ಸೆರೆನಾ ವಿಲಿಯಮ್ಸ್‌ ಅಮೆರಿಕ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು.

ಆರ್ಥರ್‌ ಆ್ಯಷ್‌ ಕ್ರೀಡಾಂಗಣದ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸೆರೆನಾ 6–0, 6–0 ರಲ್ಲಿ ಸ್ಪೇನ್‌ನ ಕಾರ್ಲಾ ಸೊರೇಜ್‌ ನವಾರೊ ವಿರುದ್ಧ ಸುಲಭ ಗೆಲುವು ಪಡೆದರು.

ವಿಶ್ವದ ಅಗ್ರ ರ್‍್ಯಾಂಕ್‌ನ ಆಟಗಾರ್ತಿ ಕೇವಲ 52 ನಿಮಿಷಗಳಲ್ಲಿ ಪಂದ್ಯ ತಮ್ಮದಾಗಿಸಿಕೊಂಡರು. ‘ಸೆಮಿಫೈನಲ್‌ ಪ್ರವೇಶಿಸಲು ಸಾಧ್ಯವಾಗಿರುವುದು ನಿಜ­ವಾ­ಗಿಯೂ ಸಂತಸ ಉಂಟು­ಮಾಡಿದೆ’ ಎಂದು ಸೆರೆನಾ ಪ್ರತಿಕ್ರಿಯಿಸಿದ್ದಾರೆ.

ಎಂಟರಘಟ್ಟದ ಪಂದ್ಯದಲ್ಲಿ ಎದುರಾಳಿಗೆ ಯಾವುದೇ ಗೇಮ್‌ ಬಿಟ್ಟುಕೊಡದೆ ಗೆಲುವು ಪಡೆಯುವ ಮೂಲಕ ಸೆರೆನಾ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. 1989ರ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮಾರ್ಟಿನಾ ನವ್ರಾಟಿ­ಲೋವಾ 6–0, 6–0 ರಲ್ಲಿ ಬಲ್ಗೇರಿ­ಯದ ಮನುಯೆಲಾ ಮಲೀವಾ ಅವರನ್ನು ಸೋಲಿಸಿದ್ದರು. ಆ ಬಳಿಕ ಇಂತಹ ಸಾಧನೆ ಮಾಡಿದ್ದು ಸೆರೆನಾ ಮಾತ್ರ.

ಅಮೆರಿಕದ ಆಟಗಾರ್ತಿ ಪ್ರಸಕ್ತ ಟೂರ್ನಿಯಲ್ಲಿ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಎದುರಾಳಿಗೆ ಬಿಟ್ಟುಕೊಟ್ಟಿರುವುದು ಕೇವಲ 13 ಗೇಮ್‌ಗಳನ್ನು ಮಾತ್ರ.

ಸೆರೆನಾ ನಾಲ್ಕರಘಟ್ಟದ ಪಂದ್ಯದಲ್ಲಿ ಚೀನಾದ ಲೀ ನಾ ಅವರ ಸವಾಲನ್ನು ಎದುರಿಸುವರು. ಮೂರನೇ ಶ್ರೇಯಾಂಕದ ಲೀ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಯಾಸದ ಗೆಲುವು ಪಡೆದರು. ಅವರು 6–4, 6–7, 6–2 ರಲ್ಲಿ ರಷ್ಯಾದ ಏಕ್ತರೀನಾ ಮಕರೋವಾ ವಿರುದ್ಧ ಜಯ ಸಾಧಿಸಿದರು. ಅಮೆರಿಕ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಚೀನಾದ ಮೊದಲ ಸ್ಪರ್ಧಿ ಎಂಬ ಗೌರವವನ್ನು ಲೀ ತಮ್ಮದಾಗಿಸಿಕೊಂಡರು.

ಬೆಲಾರಸ್‌ನ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ 4–6, 6–3, 6–4 ರಲ್ಲಿ ಸರ್ಬಿಯದ ಅನಾ ಇವನೋವಿಚ್‌ ವಿರುದ್ಧ ಪ್ರಯಾಸದ ಗೆಲುವು ಪಡೆದರು ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆದರು. ಇವನೋ­ವಿಚ್‌ 42 ಅನಗತ್ಯ ತಪ್ಪುಗಳನ್ನೆಸಗಿ ಎದುರಾಳಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಕ್ವಾರ್ಟರ್‌ ಫೈನಲ್‌ಗೆ ಮರ್ರೆ, ಜೊಕೊವಿಚ್‌: ಸರ್ಬಿಯದ ನೊವಾಕ್‌ ಜೊಕೊವಿಚ್‌ ಮತ್ತು ಬ್ರಿಟನ್‌ನ ಆ್ಯಂಡಿ ಮರ್ರೆ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ವಿಶ್ವದ ಅಗ್ರ ರ್‍್ಯಾಂಕ್‌ನ ಆಟಗಾರ ಜೊಕೊವಿಚ್‌ 6–3, 6–0, 6–0 ರಲ್ಲಿ   ಸ್ಪೇನ್‌ನ ಮಾರ್ಸೆಲ್‌ ಗ್ರಾನೊಲ್ಲೆರ್ಸ್‌ ಅವರನ್ನು ಮಣಿಸಿದರು. 2011 ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದ ಮರ್ರೆ 79 ನಿಮಿಷಗಳಲ್ಲಿ ಪಂದ್ಯ ಜಯಿಸಿದರು.

ಜೊಕೊವಿಚ್‌ ಎಂಟರಘಟ್ಟದ ಪಂದ್ಯದಲ್ಲಿ ರಷ್ಯಾದ ಮಿಖಾಯಿಲ್‌ ಯೂಜ್ನಿ ಅವರ ಸವಾಲನ್ನು ಎದುರಿಸಲಿದ್ದಾರೆ. ಯೂಜ್ನಿ 6–3, 3–6, 6–7, 6–4, 7–5 ರಲ್ಲಿ ಆಸ್ಟ್ರೇಲಿಯಾದ ಲೇಟನ್‌ ಹೆವಿಟ್‌ ವಿರುದ್ಧ ಗೆದ್ದರು. 2001 ರಲ್ಲಿ ಇಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಹೆವಿಟ್‌ ಸೋಲು ಅನುಭವಿಸುವ ಮುನ್ನ ಎದುರಾಳಿಗೆ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು.

ಮೂರನೇ ಶ್ರೇಯಾಂಕದ ಆಟಗಾರ ಮರ್ರೆ 6–7, 6–1, 6–4, 6–4 ರಲ್ಲಿ ಉಜ್ಬೆಕಿಸ್ತಾನದ ಡೆನಿಸ್‌ ಇಸ್ತೊಮಿನ್‌ ಅವರನ್ನು ಸೋಲಿಸಿದರು.

ಮತ್ತೊಂದು ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ 3–6, 6–1, 7–6, 6–2 ರಲ್ಲಿ ಜೆಕ್‌ ಗಣರಾಜ್ಯದ ಥಾಮಸ್‌ ಬೆರ್ಡಿಚ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.