ADVERTISEMENT

ಸೆಮಿಫೈನಲ್ ಕನಸಲ್ಲಿ ಜರ್ಮನಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 19:30 IST
Last Updated 21 ಜೂನ್ 2012, 19:30 IST
ಸೆಮಿಫೈನಲ್ ಕನಸಲ್ಲಿ ಜರ್ಮನಿ
ಸೆಮಿಫೈನಲ್ ಕನಸಲ್ಲಿ ಜರ್ಮನಿ   

ಗಡಾನ್‌ಸ್ಕ್ (ರಾಯಿಟರ್ಸ್): ಲೀಗ್ ಹಂತದಲ್ಲಿ ಎಲ್ಲ ಮೂರು ಪಂದ್ಯಗಳಲ್ಲಿ ಗೆಲುವು ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಜರ್ಮನಿ ತಂಡ ಯೂರೊ- 2012 ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೀಸ್ ತಂಡದ ಸವಾಲನ್ನು ಎದುರಿಸಲಿದೆ.

ಶುಕ್ರವಾರ ರಾತ್ರಿ ನಡೆಯುವ ಪಂದ್ಯದಲ್ಲಿ ಗೆಲುವು ಪಡೆಯಬೇಕಾದರೆ ಜರ್ಮನಿ ತಂಡಕ್ಕೆ ಅಸಾಮಾನ್ಯ ಪ್ರದರ್ಶನ ನೀಡುವುದು ಅನಿವಾರ್ಯ. ಏಕೆಂದರೆ ಗ್ರೀಸ್ ತಂಡದ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಲೀಗ್ ಹಂತದಲ್ಲಿ ಜರ್ಮನಿಯು ಪೋರ್ಚುಗಲ್, ಹಾಲೆಂಡ್ ಮತ್ತು ಡೆನ್ಮಾರ್ಕ್ ತಂಡಗಳನ್ನು ಮಣಿಸಿತ್ತು. ಆದರೆ ಗ್ರೀಸ್ ತಂಡದ ರಕ್ಷಣಾ ವಿಭಾಗ ಈ ಎಲ್ಲ ತಂಡಗಳಿಗಿಂತಲೂ ಬಲಿಷ್ಠವಾಗಿದೆ. ಈ ಕಾರಣ ಜರ್ಮನಿ ಶುಕ್ರವಾರದ ಪಂದ್ಯಕ್ಕೆ ಕೆಲವೊಂದು ಹೊಸ ಯೋಜನೆಗಳನ್ನು ರೂಪಿಸಿರುವುದು ಖಚಿತ.

ಗ್ರೀಸ್ 2004 ರಲ್ಲಿ ಯೂರೊ ಚಾಂಪಿಯನ್ ಎನಿಸಿತ್ತು. ಅದೊಂದು ಸಾಧನೆಯನ್ನು ಬಿಟ್ಟರೆ ಈ ತಂಡ ಪ್ರಮುಖ ಟೂರ್ನಿಯಲ್ಲಿ ಅಂತಹ ಪ್ರದರ್ಶನ ನೀಡಿಲ್ಲ. ವಿಶ್ವಕಪ್‌ನಲ್ಲಿ ಎರಡು ಸಲ `ರನ್ನರ್ ಅಪ್~ ಸ್ಥಾನ ಪಡೆದಿತ್ತು. ಮತ್ತೊಂದೆಡೆ ಜರ್ಮನಿ ಇಲ್ಲಿ ಮೂರು ಸಲ ಚಾಂಪಿಯನ್ ಎನಿಸಿದ್ದರೆ, ಮೂರು ಸಲ ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿದೆ. ಆದ್ದರಿಂದ ಇತಿಹಾಸವನ್ನು ನೋಡಿದರೆ ಜರ್ಮನಿ ತಂಡವೇ ಶುಕ್ರವಾರ ಗೆಲುವು ಪಡೆಯುವ ನೆಚ್ಚಿನ ತಂಡ ಎನಿಸಿದೆ.

ಆದರೆ ಎದುರಾಳಿ ತಂಡವನ್ನು ಹಗುರವಾಗಿ ಕಾಣಲು ಜರ್ಮನಿ ಸಿದ್ಧವಿಲ್ಲ. ಏಕೆಂದರೆ ಈ ಹಿಂದೆ ಹಲವು ಅಚ್ಚರಿಯ ಫಲಿತಾಂಶಗಳನ್ನು ಗ್ರೀಸ್ ನೀಡಿದೆ. `ಗ್ರೀಸ್ ಪ್ರಬಲ ತಂಡ. ತಾಂತ್ರಿಕವಾಗಿಯೂ ಅದು ಬಲಿಷ್ಠವಾಗಿದೆ. ಈ ತಂಡದ ಆಟಗಾರರು ವೇಗದ ಆಟಕ್ಕೆ ಹೆಸರು ಪಡೆದಿದ್ದಾರೆ. ಅದೇ ರೀತಿ ಗೋಲು ಗಳಿಸಲು ಲಭಿಸುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ~ ಎಂದು ಜರ್ಮನಿ ತಂಡದ ಮಿಡ್‌ಫೀಲ್ಡರ್ ಸಾಮಿ ಕೆದೀರಾ ನುಡಿದಿದ್ದಾರೆ. `ಅವರ ಎದುರು ತಾಳ್ಮೆಯ ಆಟವಾಡುವುದು ಅಗತ್ಯ~ ಎಂಬುದು ಈ ಆಟಗಾರನ ಹೇಳಿಕೆ.

 ನಿಷೇಧ ಶಿಕ್ಷೆಯ ಕಾರಣ ಕಳೆದ ಪಂದ್ಯದಲ್ಲಿ ಆಡದಿದ್ದ ಡಿಫೆಂಡರ್ ಜೆರೋಮ್ ಬೊಟೆಂಗ್ ತಂಡಕ್ಕೆ ಮರಳಿರುವುದು ಜರ್ಮನಿ ತಂಡದ ಬಲವನ್ನು ಹೆಚ್ಚಿಸಿದೆ.

ಮತ್ತೊಂದೆಡೆ ಗ್ರೀಸ್ ತಂಡಕ್ಕೆ ನಿಷೇಧ ಶಿಕ್ಷೆಗೆ ಒಳಗಾಗಿರುವ ನಾಯಕ ಜಾರ್ಜಸ್ ಕರಗೋನಿಸ್ ಅವರ ನೆರವು ಲಭಿಸುತ್ತಿಲ್ಲ. ಈ ಮಿಡ್‌ಫೀಲ್ಡರ್‌ಗೆ ಬದಲಿ ಆಟಗಾರನಾಗಿ ಯಾರು ಕಣಕ್ಕಿಳಿಯುವರು ಎಂಬುದನ್ನು ಗ್ರೀಸ್ ಕೋಚ್ ಫೆರ್ನಾಂಡೊ ಸಂಟೋಸ್ ಇನ್ನೂ ಬಹಿರಂಗಡಿಸಿಲ್ಲ. ಕರಗೋನಿಸ್ ಸ್ಥಾನವನ್ನು ಗ್ರಿಗೊರಿಸ್ ಮಾಕೊಸ್ ತುಂಬುವ ಸಾಧ್ಯತೆಯೇ ಅಧಿಕ.

`ಸಂಘಟಿತ ಹೋರಾಟ ನೀಡುವುದು ನಮ್ಮ ಯಶಸ್ಸಿನ ಗುಟ್ಟು. ಎಲ್ಲ 11 ಆಟಗಾರರು ತಂಡಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲೂ ಸಂಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡುವ ಗುರಿ ನಮ್ಮದು~ ಎಂದು ಗ್ರೀಸ್ ತಂಡದ ಮಿಡ್‌ಫೀಲ್ಡರ್ ಕೋಸ್ಟಾಸ್ ಕಟ್ಸೊರಾನಿಸ್ ಹೇಳಿದ್ದಾರೆ.

ಇಂದಿನ ಕ್ವಾರ್ಟರ್ ಫೈನಲ್ ಪಂದ್ಯ

ADVERTISEMENT

ಜರ್ಮನಿ- ಗ್ರೀಸ್
ಆರಂಭ: ಭಾರತೀಯ ಕಾಲಮಾನ ಮಧ್ಯರಾತ್ರಿ 12.15ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.