ADVERTISEMENT

ಸೆಹ್ವಾಗ್ ವಿಕೆಟ್ ಮಹತ್ವದ್ದಾಗಿತ್ತು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಪಂದ್ಯದ ಮಹತ್ವದ ಘಟ್ಟದಲ್ಲಿ ವೀರೇಂದ್ರ ಸೆಹ್ವಾಗ್ ಅವರ ವಿಕೆಟ್ ದೊರೆತದ್ದು ನಮ್ಮ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು ಎಂದು ಪುಣೆ ವಾರಿಯರ್ಸ್ ತಂಡದ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ನವದೆಹಲಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ 20 ರನ್‌ಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಜಯ ಪಡೆದಿತ್ತು. ಗೆಲುವಿಗೆ 193 ರನ್‌ಗಳ ಗುರಿ ಬೆನ್ನಟ್ಟಿದ್ದ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 172 ರನ್ ಗಳಿಸಲು ಶಕ್ತವಾಗಿತ್ತು. 32 ಎಸೆತಗಳಲ್ಲಿ 57 ರನ್ ಗಳಿಸಿದ್ದ ಸೆಹ್ವಾಗ್ ಅವರು ಮುರಳಿ ಕಾರ್ತಿಕ್‌ಗೆ ವಿಕೆಟ್ ಒಪ್ಪಿಸಿದ್ದರು.

`ಸೆಹ್ವಾಗ್ ದೊಡ್ಡ ಹೊಡೆತಗಳ ಮೂಲಕ ಎಲ್ಲ ಬೌಲರ್‌ಗಳ ಮೇಲೂ ಪ್ರಭುತ್ವ ಸಾಧಿಸಿದ್ದರು. ಅವರು ಔಟಾದ ಬಳಿಕವಷ್ಟೇ ನಾವು ಪಂದ್ಯದ ಮೇಲೆ ಹಿಡಿತ ಸಾಧಿಸಿದೆವು~ ಎಂದು ಗಂಗೂಲಿ ನುಡಿದಿದ್ದಾರೆ.

ಕೆವಿನ್ ಪೀಟರ್ಸನ್ ಅವರ ವಿಕೆಟ್ ಪಡೆದ ಬಳಿಕ ಅತಿಯಾಗಿ ಸಂಭ್ರಮಿಸಿದ್ದರ ಬಗ್ಗೆ ಕೇಳಿದಾಗ ಗಂಗೂಲಿ, `ಪೀಟರ್ಸನ್ ವಿಕೆಟ್ ದೊರೆತಾಗ ನಿರಾಳನಾದೆ. ಇದು ಸಂಭ್ರಮಕ್ಕೆ ಕಾರಣ~ ಎಂದು ಉತ್ತರಿಸಿದರು. ಗಂಗೂಲಿ ತಮ್ಮ ಮೊದಲ ಎಸೆತದಲ್ಲಿ ಪೀಟರ್ಸನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ್ದರು.ಆಲ್‌ರೌಂಡ್ ಪ್ರದರ್ಶನ ನೀಡಿದ ಗಂಗೂಲಿ  `ಪಂದ್ಯಶ್ರೇಷ್ಠ~ ಪ್ರಶಸ್ತಿ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.