ADVERTISEMENT

ಸೈನಾಗೆ ಆಘಾತ ನೀಡಿದ ಮರಿಯಾ

ಬ್ಯಾಡ್ಮಿಂಟನ್‌: ಪ್ರೀ ಕ್ವಾರ್ಟರ್‌ ಫೈನಲ್‌ಗೆ ಶ್ರೀಕಾಂತ್‌, ಸಿಂಧು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2016, 19:17 IST
Last Updated 14 ಆಗಸ್ಟ್ 2016, 19:17 IST
ಸಿಂಗಲ್ಸ್‌ ವಿಭಾಗದಲ್ಲಿ ಕೆ. ಶ್ರೀಕಾಂತ್‌ ಆಟದ ವೈಖರಿ  –ಎಎಫ್‌ಪಿ ಚಿತ್ರ
ಸಿಂಗಲ್ಸ್‌ ವಿಭಾಗದಲ್ಲಿ ಕೆ. ಶ್ರೀಕಾಂತ್‌ ಆಟದ ವೈಖರಿ –ಎಎಫ್‌ಪಿ ಚಿತ್ರ   

ರಿಯೊ ಡಿ ಜನೈರೊ (ಪಿಟಿಐ): ರಿಯೊ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪದಕದ ಭರವಸೆ ಎನಿಸಿದ್ದ ಸೈನಾ ನೆಹ್ವಾಲ್‌ ಗುಂಪು ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದ್ದಾರೆ. ಆದರೆ ಕಿದಂಬಿ ಶ್ರೀಕಾಂತ್‌ ಮತ್ತು ಪಿ.ವಿ. ಸಿಂಧು  ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಭಾನುವಾರ ನಡೆದ ‘ಜಿ’ ಗುಂಪಿನ ಎರಡನೇ ಪಂದ್ಯದಲ್ಲಿ ಸೈನಾ 18–21, 19–21 ರಲ್ಲಿ ಉಕ್ರೇನ್‌ನ ಮರಿಯಾ ಯುಲಿಟಿನಾ ಕೈಯಲ್ಲಿ ಪರಾಭವಗೊಂಡರು. 

ಲಂಡನ್‌ ಒಲಿಂಪಿಕ್‌ ಕೂಟದಲ್ಲಿ ಕಂಚು ಜಯಿಸಿದ್ದ ಮತ್ತು ವಿಶ್ವ ಕ್ರಮಾಂಕಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿರುವ ಸೈನಾ 61ನೇ ಸ್ಥಾನದಲ್ಲಿರುವ ಆಟಗಾರ್ತಿಯ ಎದುರು ಅನಿರೀಕ್ಷಿತ ಸೋಲು ಅನುಭವಿಸಿದ್ದು  ದೇಶದ ಕ್ರೀಡಾಪ್ರೇಮಿಗಳ ನಿರಾಸೆಗೆ ಕಾರಣವಾಗಿದೆ.

ಸೈನಾ ಮೊದಲ ಪಂದ್ಯದಲ್ಲಿ ಬ್ರೆಜಿಲ್‌ನ ವಿನ್ಸೆಂಟ್‌ ಲೋಹಾಯ್ನಿ ಅವರನ್ನು ಮಣಿಸಿದ್ದರು. ಯುಲಿಟಿನಾ ಕೂಡಾ ಬ್ರೆಜಿಲ್‌ ಆಟಗಾರ್ತಿಯ ವಿರುದ್ಧ ಗೆದ್ದಿದ್ದರು. ‘ಜಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಯುಲಿಟಿನಾ ನಾಕೌಟ್‌ ಹಂತ ಪ್ರವೇಶಿಸಿದರು.

ಮೊದಲ ಗೇಮ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ಹೈದರಾಬಾದ್‌ನ ಆಟಗಾರ್ತಿ 6–1 ರಲ್ಲಿ ಮುನ್ನಡೆ ಪಡೆದಿದ್ದರು. ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟು ಎದುರಾಳಿಗೆ 8–8 ರಲ್ಲಿ ಸಮಬಲ ಸಾಧಿಸಲು ಅವಕಾಶ ಮಾಡಿಕೊಟ್ಟರು.

ಆ ಬಳಿಕ ಜಿದ್ದಾಜಿದ್ದಿನ ಹೋರಾಟದ ನಡೆದು 13–13 ರಲ್ಲಿ ಸಮಬಲ ಕಂಡುಬಂತು. ಸೈನಾ 16–15 ಮತ್ತು 17–16 ರಲ್ಲಿ ಮುನ್ನಡೆ ಪಡೆದರು. ಆದರೆ ತಿರುಗೇಟು ನೀಡಿದ ಯುಟಿಲಿನಾ 19–17 ರಲ್ಲಿ ಮೇಲುಗೈ ಸಾಧಿಸಿದರು. ಅನಂತರ ಎದುರಾಳಿಗೆ ಒಂದು ಪಾಯಿಂಟ್‌ ಬಿಟ್ಟುಕೊಟ್ಟು ಗೇಮ್‌ ಗೆದ್ದರು.

ಎರಡನೇ ಗೇಮ್‌ನಲ್ಲೂ ಉಕ್ರೇನ್‌ನ ಆಟಗಾರ್ತಿ ಪ್ರಬಲ ಸ್ಮ್ಯಾಷ್‌ ಹಾಗೂ ಹಾಫ್‌ ಸ್ಮ್ಯಾಷ್‌ಗಳ ಮೂಲಕ ಸೈನಾ ಅವರನ್ನು ಕಾಡಿ ಪಂದ್ಯ ಗೆದ್ದರು. ಮಂಡಿನೋವಿನ ಸಮಸ್ಯೆಯಿಂದ ಬಳಲಿದ ಸೈನಾ ಎಂದಿನ ಲಯದಲ್ಲಿ ಆಡಲು ವಿಫಲರಾದರು. ಇದರ ಪ್ರಯೋಜನ ಪಡೆದ ಯುಲಿಟಿನಾ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಸಿಂಧು ತಮ್ಮ ಎರಡನೇ ಪಂದ್ಯದಲ್ಲಿ  19–21, 21–15, 21–17 ರಲ್ಲಿ ಕೆನಡಾದ ಮಿಷೆಲ್‌ ಲೀ ವಿರುದ್ಧ ಗೆದ್ದು 16ರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡರು.

ಶ್ರೀಕಾಂತ್‌ಗೆ ಜಯ: ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್‌ 21–6, 21–18 ರಲ್ಲಿ ಸ್ವೀಡನ್‌ನ ಹೆನ್ರಿ  ಹರ್ಸ್‌ಕೈನೆನ್‌ ಅವರನ್ನು ಮಣಿಸಿ ನಾಕೌಟ್‌ ಹಂತ ಪ್ರವೇಶಿಸಿದರು.

‘ಮಂಡಿ ನೋವಿನ ಸಮಸ್ಯೆ ಕಾಡಿತು’
‘ಬಲ ಮಂಡಿಯಲ್ಲಿ ನೋವು ಕಾಣಿಸಿಕೊಂಡದ್ದರಿಂದ ಕೋರ್ಟ್‌ನಲ್ಲಿ ಚುರುಕಿನಿಂದ ಅತ್ತಿತ್ತ ಓಡಲು ಆಗಲಿಲ್ಲ. ಇದರಿಂದ ಶ್ರೇಷ್ಠ ಪ್ರದರ್ಶನ ನೀಡುವಲ್ಲಿ ವಿಫಲಳಾದೆ’ ಎಂದು ಸೈನಾ ಪ್ರತಿಕ್ರಿಯಿಸಿದ್ದಾರೆ.

ಮನೋಜ್‌ಗೆ ನಿರಾಸೆ
ಪುರುಷರ 64 ಕೆ.ಜಿ. ವಿಭಾಗದ ಬಾಕ್ಸಿಂಗ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ಮನೋಜ್‌ ಕುಮಾರ್‌ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದರು.

ಭಾನುವಾರ ನಡೆದ ಪುರುಷರ ಲೈಟ್‌ ವೆಲ್ಟರ್‌ವೇಟ್‌ ಸ್ಪರ್ಧೆಯಲ್ಲಿ ಮನೋಜ್‌ 0–3ರಿಂದ ಉಜ್‌ಬೆಕಿಸ್ತಾನದ ಫಾಜಿಲಿದ್ದಿನ್‌ ಗಯಿಬ್ನಾಜರೊವ್‌ ವಿರುದ್ಧ ಸೋತರು.

ಹಿಂದಿನ ಪಂದ್ಯಗಳಲ್ಲಿ ದಿಟ್ಟ ಹೋರಾಟ ನಡೆಸಿದ್ದ ಮನೋಜ್‌, ಉಜ್‌ ಬೆಕಿಸ್ತಾನದ ಬಾಕ್ಸರ್‌ನ ಶರವೇಗದ ಪಂಚ್‌ಗಳ ಮುಂದೆ ನಲುಗಿಹೋದರು.

ಬಾಕ್ಸಿಂಗ್ ವೀಕ್ಷಿಸಿದ ಮೇವೆದರ್
ವೃತ್ತಿಪರ ಬಾಕ್ಸಿಂಗ್ ಚಾಂಪಿಯನ್ ಫ್ಲಾಯ್ಡ್ ಮೇವೆದರ್ ಜೂನಿಯರ್ ಅವರು ಶನಿವಾರ ಒಲಿಂಪಿಕ್ಸ್‌ನ ಬಾಕ್ಸಿಂಗ್‌ ಪಂದ್ಯಗಳನ್ನು ವೀಕ್ಷಿಸಿದರು.
ರಿಯೊ ಸೆಂಟ್ರೊ ಪೆವಿಲಿಯನ್‌ ಸಿಕ್ಸ್‌ನಲ್ಲಿ ನಡೆದ ವೆಲ್ಟರ್‌ವ್ಹೇಟ್ ಕ್ವಾರ್ಟರ್‌ಫೈನಲ್‌, ಹೆವಿವ್ಹೇಟ್‌ ವಿಭಾಗದ  ಸೆಮಿಫೈನಲ್‌ಗಳನ್ನು ಅವರು ವೀಕ್ಷಿಸಿದರು.

ಬ್ರಿಟನ್‌ಗೆ  ಚಿನ್ನ
ಬ್ರಿಟನ್ ವನಿತೆಯರ ತಂಡವು ಒಲಿಂಪಿಕ್ಸ್‌ ಸೈಕ್ಲಿಂಗ್ ಸ್ಪರ್ಧೆಯ ಟೀಮ್ ಪರ್ಸೂಟ್‌ನಲ್ಲಿ ತನ್ನದೇ ದಾಖಲೆ ಉತ್ತಮಪಡಿಸಿಕೊಂಡು ಚಿನ್ನ ಗೆದ್ದಿತು.

ಕ್ಯಾಟಿ  ಆರ್ಚಿಬಾಲ್ಡ್, ಲಾರಾ ಟ್ರಾಟ್, ಎಲಿನಾರ್ ಬಾರ್ಕರ್ ಮತ್ತು ಜೊವಾನಾ ರಸೆಲ್  ಶಾಂದ್ ಅವರಿದ್ದ ತಂಡವು 4  ಕಿಲೋಮೀಟರ್ಸ್ ರೇಸ್‌ನಲ್ಲಿ ಗೆದ್ದಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.