ADVERTISEMENT

ಸೈನಾ, ಕಶ್ಯಪ್‌ ಮೇಲೆ ಭರವಸೆ

ಇಂದಿನಿಂದ ಥಾಮಸ್‌ ಹಾಗೂ ಉಬೇರ್‌ ಕಪ್‌: ಚೀನಾ ನೆಚ್ಚಿನ ತಂಡ

​ಪ್ರಜಾವಾಣಿ ವಾರ್ತೆ
Published 17 ಮೇ 2014, 19:30 IST
Last Updated 17 ಮೇ 2014, 19:30 IST
ಸೈನಾ, ಕಶ್ಯಪ್‌ ಮೇಲೆ ಭರವಸೆ
ಸೈನಾ, ಕಶ್ಯಪ್‌ ಮೇಲೆ ಭರವಸೆ   

ನವದೆಹಲಿ (ಪಿಟಿಐ/ ಐಎಎನ್‌ಎಸ್‌): ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌ ಮತ್ತು ಭಾರತ ತಂಡದ ನೇತೃತ್ವ ವಹಿಸಿ ಕೊಂಡಿರುವ ಪರುಪಳ್ಳಿ ಕಶ್ಯಪ್‌ ಭಾನು ವಾರ ಆರಂಭವಾಗಲಿರುವ ಥಾಮಸ್ ಮತ್ತು ಉಬೇರ್‌ ಕಪ್‌ನ ಫೈನಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದಾರೆ.

ಇದೇ ಮೊದಲ ಸಲ ಮಹತ್ವದ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆ. ಸಿರಿ ಫೋರ್ಟ್‌ ಕ್ರೀಡಾ ಸಂಕೀರ್ಣದಲ್ಲಿ ಮೇ  18ರಿಂದ 25ರ ವರೆಗೆ ಈ ಟೂರ್ನಿ ನಡೆಯಲಿದ್ದು, ಭಾರತದಲ್ಲಿ ಬ್ಯಾಡ್ಮಿಂಟನ್‌ ಮತ್ತಷ್ಟು ಖ್ಯಾತಿ ಗಳಿಸಲು ನೆರವಾಗಲಿದೆ. ಹೋದ ವರ್ಷದ ಥಾಮಸ್‌ ಮತ್ತು ಉಬೇರ್‌ ಕಪ್‌ನಲ್ಲಿ ಚೀನಾ ಚಾಂಪಿಯನ್ ಆಗಿತ್ತು. ಈ ಸಲವೂ ಚೀನಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

ಕ್ವಾರ್ಟರ್ ಫೈನಲ್‌ ಗುರಿ: ಹದಿನಾರು ರಾಷ್ಟ್ರಗಳು ಪಾಲ್ಗೊಂಡಿರುವ ಟೂರ್ನಿ ಯಲ್ಲಿ ವಿಶ್ವ ಖ್ಯಾತ ಆಟಗಾರರು ಪೈಪೋಟಿ ನಡೆಸಲಿದ್ದಾರೆ. ಭಾರತ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಗುರಿ ಹೊಂದಿದೆ.

ಪುರುಷರಿಗಾಗಿ ನಡೆಯುವ ಥಾಮಸ್‌ ಕಪ್‌ನಲ್ಲಿ ಎಂಟು ಸಲ ಮತ್ತು ಮಹಿಳಾ ವಿಭಾಗಕ್ಕಾಗಿ ಜರುಗುವ ಉಬೇರ್‌ ಕಪ್‌ನಲ್ಲಿ ಮೂರು ಸಲ ಪಾಲ್ಗೊಂಡಿರುವ ಭಾರತ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಇಂಡೊನೇಷ್ಯಾ, ಚೀನಾ ಮತ್ತು ಮಲೇಷ್ಯಾ ತಂಡಗಳೇ ಪ್ರಾಬಲ್ಯ ಮೆರೆದಿವೆ.

ಅನೂಪ್‌ ಶ್ರೀಧರ್‌, ಅರವಿಂದ್‌ ಭಟ್‌ ಮತ್ತು ನಿಖಿಲ್ ಕಾನಿಟ್ಕರ್‌ ಅವರ ನ್ನೊಳಗೊಂಡ ಭಾರತ ತಂಡ 2006ರ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. 2010ರ ಟೂರ್ನಿಯಲ್ಲಿ ಭಾರತ ಪುರುಷರ ತಂಡ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿತ್ತು.  2012ರಲ್ಲಿ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿದ್ದ ಭಾರತ ಹಿಂದಿನ ನಿರಾಸೆಯಿಂದ ಹೊರಬರಬೇಕಿದೆ.

‘ಮೊದಲ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಿದೆ. ಆರಂಭದ ಪೈಪೋಟಿ ಯನ್ನು ಸಮರ್ಥವಾಗಿ ಎದುರಿಸಿದರೆ ಮುಂದಿನ ಹಾದಿ ಸುಗಮವಾಗಲಿದೆ’ ಎಂದು ಕಶ್ಯಪ್‌ ಹೇಳಿದ್ದಾರೆ. ಮೊದಲ ಸುತ್ತಿನಲ್ಲಿ ಈ ಆಟಗಾರ ಮಲೇಷ್ಯಾದ ಎದುರು ಆಡಲಿದ್ದಾರೆ.

ರಾಜ್ಯದ ಆಟಗಾರರ ಸವಾಲು
ಅನುಭವಿ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಅರವಿಂದ್‌ ಭಟ್‌ ಮತ್ತು ಅನೂಪ್‌ ಶ್ರೀಧರ್‌ ಅವರು ರಾಷ್ಟ್ರೀಯ ತಂಡದಲ್ಲಿರುವ ಕರ್ನಾಟಕದ  ಆಟಗಾರರು.

ಪ್ರಕಾಶ್‌ ಪಡುಕೋಣೆ ಅಕಾಡೆಮಿಯಲ್ಲಿ ತರಬೇತುಗೊಂಡಿರುವ 34 ವರ್ಷದ ಅರವಿಂದ್‌ 2008ರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಮಡಿಕೇರಿಯ ಆಟಗಾರ ಇದೇ ವರ್ಷದ ಮಾರ್ಚ್‌ನಲ್ಲಿ ಜರ್ಮನ್‌ ಗ್ರ್ಯಾಂಡ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.

ಬೆಂಗಳೂರಿನ ಅನೂಪ್‌ 2007ರ ಥಾಮಸ್‌ ಕಪ್‌ಗೆ ನಾಯಕರಾಗಿದ್ದರು. ವಿಶ್ವ ಬ್ಯಾಡ್ಮಿಂಟನ್‌ ರ್‍್ಯಾಂಕಿಂಗ್ ಪಟ್ಟಿಯಲ್ಲಿ 60ನೇ ಸ್ಥಾನ ಹೊಂದಿದ್ದಾರೆ. ಸಾಕಷ್ಟು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿರುವ ಅಶ್ವಿನಿ ಡಬಲ್ಸ್‌ ವಿಭಾಗದಲ್ಲಿ ಸವಾಲನ್ನು ಮುನ್ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT