ನವದೆಹಲಿ (ಪಿಟಿಐ): ಸೈನಾ ನೆಹ್ವಾಲ್ ಅವರು ಚೀನಾದ ಕ್ವಿಂಡಾವೊದಲ್ಲಿ ನಡೆಯುತ್ತಿರುವ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸೋಲು ಅನುಭವಿಸಿದರು. ಭಾರತದ ಇತರ ಸ್ಪರ್ಧಿಗಳೂ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದರು.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ 13-21, 16-21 ರಲ್ಲಿ ಚೀನಾದ ಕ್ಸಿಯಾವೊ ಜೀ ಚೆನ್ ಎದುರು ಪರಾಭವಗೊಂಡರು. ಐದನೇ ಶ್ರೇಯಾಂಕ ಹೊಂದಿದ್ದ ಭಾರತದ ಆಟಗಾರ್ತಿ ತನಗಿಂತ ಕೆಳಗಿನ ರ‌್ಯಾಂಕ್‌ನ ಸ್ಪರ್ಧಿಯ ವಿರುದ್ಧ ಚೇತರಿಕೆಯ ಪ್ರದರ್ಶನ ನೀಡಲು
ವಿಫಲರಾದರು. ಚೀನಾದ ಆಟಗಾರ್ತಿ 44 ನಿಮಿಷಗಳ ಹೋರಾಟದ ಬಳಿಕ ಗೆಲುವು ಪಡೆದರು. ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಬಿ. ಸಾಯಿ ಪ್ರಣೀತ್ 9-21, 18-21 ರಲ್ಲಿ ಚೀನಾದ ಜೆಂಗ್ ಮಿಂಗ್ ವಾಂಗ್ ಎದುರು ಸೋಲು ಅನುಭವಿಸಿದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಕೊರಿಯಾದ ಸಾ ರಾಂಗ್ ಕಿಮ್- ಹೆ ಇನ್ ಚೋಯ್ ಜೋಡಿ 21-14, 11-21, 21-17 ರಲ್ಲಿ ವಿ. ದಿಜು ಮತ್ತು ಜ್ವಾಲಾ ಗುಟ್ಟಾ ಅವರನ್ನು ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಹಾಂಕಾಂಗ್‌ನ ವಾಯ್ ಹಾಂಗ್ ವೊಂಗ್- ಹೊಯ್ ವಾ ಚಾವ್ 21-19, 21-7 ರಲ್ಲಿ ಅಕ್ಷಯ್ ದೇವಾಲ್ಕರ್- ಪ್ರದ್ನ್ಯಾ ವಿರುದ್ಧ ಜಯ ಗಳಿಸಿದರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರದ್ಯ್ನಾ ಮತ್ತು ಪ್ರಜಕ್ತಾ ಸಾವಂತ್ 17-21, 12-21 ರಲ್ಲಿ ಥಾಯ್ಲೆಂಡ್‌ನ ದುವಾಂಗ್‌ನಾಂಗ್ ಅರೂನ್‌ಕೆಸರ್ನ್ ಹಾಗೂ ಕುಂಚಲಾ ವೊರವಿಚಿತ್‌ಚೈಕುಲ್ ಎದುರು ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.