ADVERTISEMENT

ಸೋಮ್, ಸಾನಿಯಾಗೆ ಸೋಲು

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ಮೆಲ್ಬರ್ನ್ (ಪಿಟಿಐ): ಭಾರತದ ಸಿಂಗಲ್ಸ್ ಹೋರಾಟಕ್ಕೆ ಮೊದಲ ಸುತ್ತಿನಲ್ಲಿಯೇ ತೆರೆಬಿದ್ದಿದೆ.ಸೋಮವಾರ ಇಲ್ಲಿ ಶುರುವಾದ ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಮ್ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸಾನಿಯಾ ಮಿರ್ಜಾ ಹಾಗೂ ಸೋಮ್‌ದೇವ್ ದೇವ್‌ವರ್ಮನ್ ಅವರು ಸೋಲು ಕಂಡರು. ರಾಡ್ ಲಾವೆರ್ ಅರೇನಾ ಕೋರ್ಟ್ ಏಳರಲ್ಲಿ ನಡೆದ ಪುರುಷರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋಮ್‌ದೇವ್ 6-7, 3-6, 4-6ರಲ್ಲಿ ಸ್ಪೇನ್‌ನ ಟಾಮಿ ರಾಬ್ರೆಡೊ ಎದುರು ಪರಾಭವಗೊಂಡರು.

52ನೇ ರ್ಯಾಂಕ್ ಹೊಂದಿರುವ ರಾಬ್ರೆಡೊಗೆ ಸಾಕಷ್ಟು ಪೈಪೋಟಿ ನೀಡುವಲ್ಲಿ ಸೋಮ್ ಯಶಸ್ವಿಯಾದರು ಎನ್ನುವುದೊಂದೇ ಸಮಾಧಾನ. ಅದಕ್ಕೆ 55 ನಿಮಿಷ ನಡೆದ ಮೊದಲ ಸೆಟ್ ಸಾಕ್ಷಿ. ಈ ಸೆಟ್ ಟೈಬ್ರೇಕರ್ ಹಂತ ತಲುಪಿತ್ತು. ಉಭಯ ಆಟಗಾರರು ಆಕರ್ಷಕ ಏಸ್‌ಗಳನ್ನು ಹಾಕಿ ಗಮನ ಸೆಳೆದರು.ಆದರೆ ಎರಡನೇ ಸೆಟ್‌ನಲ್ಲಿ ಡಬಲ್ ಫಾಲ್ಟ್ಸ್ ಎಸಗಿದ್ದು ಭಾರತದ ಆಟಗಾರನಿಗೆ ಮುಳುವಾಯಿತು. ಈ ಸೆಟ್‌ನಲ್ಲಿ ಅವರು 3-6ರಲ್ಲಿ ಸೋಲುಕಂಡರು. 46 ನಿಮಿಷಗಳಲ್ಲಿ ಈ ಸೆಟ್ ಮುಗಿದು ಹೋಯಿತು. ಕೊನೆಯ ಸೆಟ್‌ನಲ್ಲಿ ತಿರುಗೇಟು ನೀಡಲು ದೇವ್‌ವರ್ಮನ್ ಪ್ರಯತ್ನ ನಡೆಸಿದರಾದರೂ ಅದಕ್ಕೆ ರಾಬ್ರೆಡೊ ಅವಕಾಶ ನೀಡಲಿಲ್ಲ.

ರಾಬ್ರೆಡೊ 9 ಏಸ್ ಹಾಕಿದರೆ ಸೋಮ್ 6 ಏಸ್ ಸಿಡಿಸಿದರು. ಈ ಪಂದ್ಯ ಎರಡು ಗಂಟೆ 37 ನಿಮಿಷ ನಡೆಯಿತು.108ನೇ ರ್ಯಾಂಕ್‌ನ ದೇವ್‌ವರ್ಮನ್ ಈ ಟೂರ್ನಿಗೆ ವೈಲ್ಡ್‌ಕಾರ್ಡ್ ಪ್ರವೇಶ ಗಿಟ್ಟಿಸಿದ್ದರು. ಈ ಟೂರ್ನಿಯ ಸಿಂಗಲ್ಸ್‌ನಲ್ಲಿ ಅವರು ಇದೇ ಮೊದಲ ಬಾರಿ ಆಡಿದರು, 

ಸಾನಿಯಾ ಕನಸು ಭಗ್ನ: ಅರ್ಹತಾ ಸುತ್ತಿನಲ್ಲಿ ಗೆದ್ದು ಪ್ರಧಾನ ಹಂತಕ್ಕೆ ಬಂದಿದ್ದ 145ನೇ ರ್ಯಾಂಕ್‌ನ ಆಟಗಾರ್ತಿ ಸಾನಿಯಾ ಅವರ ಕನಸು ಈ ಬಾರಿಯೂ ಠುಸ್ ಆಯಿತು. ಈ ಬಾರಿ ಎರಡನೇ ಸುತ್ತು ತಲುಪಲೂ ಅವರಿಂದ ಸಾಧ್ಯವಾಗಲಿಲ್ಲ. ಹಿಸೆನ್ಸ್ ಅರೇನಾ ಕೋರ್ಟ್‌ನಲ್ಲಿ ನಡೆದ ಮಹಿಳೆಯರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ 7-5, 3-6. 1-6ರಲ್ಲಿ ಬೆಲ್ಜಿಯಂನ ಜಸ್ಟಿನ್ ಹೆನಿನ್ ವಿರುದ್ಧ ಸೋಲು ಕಂಡರು.

ವಿಶೇಷವೆಂದರೆ ಮಾಜಿ ನಂಬರ್ ಒನ್ ಹಾಗೂ ಏಳು ಬಾರಿಯ ಗ್ರ್ಯಾಂಡ್‌ಸ್ಲಾಮ್ ವಿಜೇತೆ ಹೆನಿನ್‌ಗೆ ಮೊದಲ ಸೆಟ್‌ನಲ್ಲಿ ಸೋಲುಣಿಸಿದರು. ಇದೇ ರೀತಿಯ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ್ದರೆ ಭಾರತದ ಆಟಗಾರ್ತಿ ಅಚ್ಚರಿ ಫಲಿತಾಂಶಕ್ಕೆ ಕಾರಣವಾಗುತ್ತಿದ್ದರು. ಆದರೆ ಒಮ್ಮೆಲೆ ಪಂದ್ಯವನ್ನು ಕೈಚೆಲ್ಲಿದರು. ತಮ್ಮ ಅನುಭವ ಹಾಗೂ ಕೌಶಲ ತೋರಿದ ಬೆಲ್ಜಿಯಂನ ಆಟಗಾರ್ತಿ ಆಘಾತದಿಂದ ಪಾರಾದರು.

ಟೂರ್ನಿಯಲ್ಲಿ 11ನೇ ಶ್ರೇಯಾಂಕ ಪಡೆದಿರುವ ಹೆನಿನ್ ಎರಡನೇ ಸೆಟ್‌ನ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಕೊನೆಯ ಸೆಟ್‌ನಲ್ಲಿ ಸಾನಿಯಾ ಏಕೈಕ ಗೇಮ್ ಗೆಲ್ಲುವಲ್ಲಿ ಮಾತ್ರ ಸಫಲರಾದರು. ಅವರು ಎಸೆಗಿದ 9 ಡಬಲ್ ಫಾಲ್ಟ್ಸ್ ಕುತ್ತು ತಂದವು. ಇದು ಮಿರ್ಜಾ ಆಡಿದ ಸತತ ಏಳನೇ ಆಸ್ಟ್ರೇಲಿಯಾ ಓಪನ್ ಟೂರ್ನಿ ಕೂಡ.
‘ಪ್ರಬಲ ಸ್ಪರ್ಧಿಗಳಿಗೆ ಪೈಪೋಟಿ ನೀಡಲು ಸಾಧ್ಯ ಎಂಬುದನ್ನು ನಾನು ತೋರಿಸಿಕೊಟ್ಟಿದ್ದೇನೆ’ ಎಂದು ಪಂದ್ಯದ ಬಳಿಕ ಸಾನಿಯಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.