ADVERTISEMENT

ಸೌರವ್ ಕೊಚ್ಚಿ ಪರ ಆಡುವರೆ?

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ಕೊಚ್ಚಿ (ಪಿಟಿಐ): ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೊಚ್ಚಿ ಫ್ರಾಂಚೈಸಿಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜೊತೆಗೆ ಚರ್ಚೆ ನಡೆಸಿದ್ದಾರೆ.

ಐಪಿಎಲ್ ನಾಲ್ಕನೇ ಅವತರಣಿಕೆಯ ಆಟಗಾರರ ಹರಾಜಿನಲ್ಲಿ ಮಾರಾಟವಾಗದೇ ಉಳಿದ ‘ದಾದಾ’ ಕಡೆಗೆ ಕೊಚ್ಚಿ ಗಮನ ಹರಿಸಿದೆ. ಆದರೆ ಈ ಬಗ್ಗೆ ಮಾಧ್ಯಮಗಳಲ್ಲಿ ಹರಡಿಕೊಂಡಿರುವ ಸುದ್ದಿಗಳನ್ನು ಚೊಚ್ಚಿ ತಂಡದ ಅಧಿಕಾರಿಗಳು ಒಪ್ಪಿಕೊಂಡೂ ಇಲ್ಲ- ನಿರಾಕರಿಸಿಯೂ ಇಲ್ಲ. ಆದ್ದರಿಂದ ಗಂಗೂಲಿ ಕೇರಳದ ಈ ತಂಡದಲ್ಲಿ ಕಾಣಿಸಿಕೊಳ್ಳುವುದು ಇನ್ನೂ ಅಸ್ಪಷ್ಟವಾಗಿದೆ.

‘ಪ್ರತಿಕ್ರಿಯೆ ನೀಡಲು ಸಿದ್ಧವಿಲ್ಲ’ ಎಂದು ಕೊಚ್ಚಿ ತಂಡದ ಸಹ ಮಾಲೀಕ ವಿವೇಕ್ ವೇಣುಗೋಪಾಲ್ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಹರಾಜಾಗದ ಆಟಗಾರನನ್ನು ಯಾವುದೇ ತಂಡಕ್ಕೆ ಸೇರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಐಪಿಎಲ್ ಆಡಳಿತ ಮಂಡಳಿ ಒಪ್ಪಿಗೆ ನೀಡುವುದಕ್ಕಿಂತ ಮುನ್ನ ಈ ಟ್ವೆಂಟಿ-20 ಟೂರ್ನಿಯಲ್ಲಿ ಆಡುವ ಬಾಕಿ ಒಂಬತ್ತು ತಂಡಗಳಿಂದ ಸಮ್ಮತಿ ಸಿಗಬೇಕು. ಅಲ್ಲಿಯವರೆಗೆ ಏನನ್ನೂ ಹೇಳುವುದು ಸಾಧ್ಯವಿಲ್ಲವೆಂದು ಎಂದು ಬಿಸಿಸಿಐ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ.

ADVERTISEMENT

‘ಕೋಲ್ಕತ್ತ ನೈಟ್‌ರೈಡರ್ಸ್ ಕೂಡ ಸೌರವ್ ಯಾವುದೇ ರೂಪದಲ್ಲಿ ತಮ್ಮ ತಂಡದಲ್ಲಿ ಇರಬೇಕೆಂದು ಬಯಸುವುದು ಸಹಜ. ಪಶ್ಚಿಮ ಬಂಗಾಳದ ಜನರು ‘ದಾದಾ’ ಇಲ್ಲದ ನೈಟ್‌ರೈಡರ್ಸ್ ತಂಡವನ್ನು ಒಪ್ಪಿಕೊಳ್ಳುವುದ ಕಷ್ಟ. ಆದ್ದರಿಂದ ಈ ವಿಷಯವಾಗಿ ಸ್ಪಷ್ಟವಾದ ಚಿತ್ರ ಮೂಡಲು ಇನ್ನಷ್ಟು ಕಾಲ ಕಾಯಬೇಕು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.