ADVERTISEMENT

ಸೌರವ್‌ ಘೋಷಾಲ್‌ಗೆ ಆಘಾತ

ಸ್ಕ್ವಾಷ್‌: 16ರ ಘಟ್ಟಕ್ಕೆ ಲಗ್ಗೆ ಇಟ್ಟ ದೀಪಿಕಾ ಪಳ್ಳಿಕಲ್, ಜೋಷ್ನಾ ಚಿಣ್ಣಪ್ಪ

ಪಿಟಿಐ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಸೌರವ್‌ ಘೋಷಾಲ್‌ಗೆ ಆಘಾತ
ಸೌರವ್‌ ಘೋಷಾಲ್‌ಗೆ ಆಘಾತ   

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಸ್ಕ್ವಾಷ್‌ ವಿಭಾಗದಲ್ಲಿ ಭಾರತ ಗುರುವಾರ ಮಿಶ್ರ ಫಲ ಅನುಭವಿಸಿತು.

ಪುರುಷರ ಸಿಂಗಲ್ಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದ ಸೌರವ್‌ ಘೋಷಾಲ್‌ ಎರಡನೇ ಸುತ್ತಿನಲ್ಲಿ ಆಘಾತ ಅನುಭವಿಸಿದರು.

ಕೂಟದಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಸೌರವ್‌ 11–5, 11–7, 8–11, 9–11, 10–12ರಲ್ಲಿ ಜಮೈಕಾದ ಕ್ರಿಸ್ಟೋಫರ್‌ ಬಿನ್ನಿ ವಿರುದ್ಧ ಪರಾಭವಗೊಂಡರು.

ADVERTISEMENT

ಮೊದಲ ಎರಡು ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆದ ಸೌರವ್‌ 2–0ರ ಮುನ್ನಡೆ ಗಳಿಸಿದ್ದರು. ಹೀಗಾಗಿ ಅವರ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ವಿಶ್ವ ಕ್ರಮಾಂಕಪಟ್ಟಿಯಲ್ಲಿ 65ನೇ ಸ್ಥಾನದಲ್ಲಿರುವ ಕ್ರಿಸ್ಟೋಫರ್‌ ಮೂರನೇ ಗೇಮ್‌ನಲ್ಲಿ ಸೌರವ್‌ ಅವರನ್ನು ಸೋಲಿಸಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿಕೊಂಡರು.

ನಾಲ್ಕು ಮತ್ತು ಐದನೇ ಗೇಮ್‌ಗಳಲ್ಲಿ ಸೌರವ್ ದಿಟ್ಟ ಆಟ ಆಡಿದರು. ಹೀಗಿದ್ದರೂ ಅವರಿಗೆ ಎದುರಾಳಿಯ ಸವಾಲು ಮೀರಿ ನಿಲ್ಲಲು ಆಗಲಿಲ್ಲ.

2014ರ ಗ್ಲಾಸ್ಗೊ ಕ್ರೀಡಾಕೂಟದಲ್ಲಿ ಸೌರವ್‌, ಕಂಚಿನ ಪದಕದ ಹೋರಾಟದಲ್ಲಿ ಸೋತಿದ್ದರು.

ಪ್ರೀ ಕ್ವಾರ್ಟರ್‌ಗೆ ವಿಕ್ರಂ: ಪುರುಷರ ಸಿಂಗಲ್ಸ್‌ನಲ್ಲಿ ವಿಕ್ರಂ ಮಲ್ಹೋತ್ರಾ, ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಇಲ್ಲಿ 16ನೇ ಶ್ರೇಯಾಂಕ ಹೊಂದಿ ರುವ ವಿಕ್ರಂ ಮೊದಲ ಸುತ್ತಿನಲ್ಲಿ 11–6, 11–5, 11–2ರಲ್ಲಿ ಜಾಂಬಿಯಾದ ಮಾಂಡಾ ಚಿಲಾಂಬ್ವೆ ಅವರನ್ನು ಮಣಿಸಿದರು. ಎರಡನೇ ಸುತ್ತಿನ ಹೋರಾಟದಲ್ಲಿ ವಿಕ್ರಂ 11–4, 11–3, 11–0ರಲ್ಲಿ ಮಾರಿ ಷಿಯಸ್‌ನ ಕ್ಸೇವಿಯರ್‌ ಕೊಯೆನಿಗ್‌ ವಿರುದ್ಧ ಗೆದ್ದರು.

ಹರಿಂದರ್‌ ಪಾಲ್‌ ಸಂಧು ಮೊದಲ ಹೋರಾಟದಲ್ಲಿ 11–1, 11–13, 11–6, 11–8ರಲ್ಲಿ ಕ್ಯಾಮರಾನ್‌ ಸ್ಟಾಫೊರ್ಡ್‌ ಎದುರು ವಿಜಯಿಯಾದರು. ಎರಡನೇ ಪಂದ್ಯದಲ್ಲಿ ಅವರು 8–11, 6–11, 1–11ರಲ್ಲಿ ಇವಾನ್‌ ಯುಯೆನ್‌ ವಿರುದ್ಧ ಸೋತರು. ದೀಪಿಕಾ, ಜೋಷ್ನಾ ಮಿಂಚು: ಮಹಿಳೆಯರ ಸಿಂಗಲ್ಸ್‌ನಲ್ಲಿ ಕಣ ದಲ್ಲಿರುವ ದೀ‍‍ಪಿಕಾ ಪಳ್ಳಿಕಲ್‌ ಮತ್ತು ಜೋಷ್ನಾ ಚಿಣ್ಣಪ್ಪ ಅವರು 16ರ ಘಟ್ಟಕ್ಕೆ ಲಗ್ಗೆ ಇಟ್ಟರು. ಎರಡನೇ ಸುತ್ತಿನ ಹೋರಾಟದಲ್ಲಿ ಜೋಷ್ನಾ 11–3, 11–7, 11–2ರಲ್ಲಿ ಪಪುವಾ ನ್ಯೂ ಗಿನಿಯ ಲಿನೆಟ್ಟೆ ವಯಿ ಅವರನ್ನು ಮಣಿಸಿದರು.

ದೀಪಿಕಾ 11–6, 11–5, 11–5ರಲ್ಲಿ ಟ್ರಿನಿಡಾಡ್‌ ಮತ್ತು ಟೊಬ್ಯಾಗೊದ ಚಾರ್ಲ್‌ಟನ್‌ ನ್ಯಾಗ್ಸ್‌ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.