ADVERTISEMENT

ಸ್ಕ್ವಾಷ್: ಮಿಂಚಿದ ಅನಕಾ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಭಾರತದ ಅನಕಾ ಅಲಂಕಮೊನಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಇಪ್ಸ್‌ವಿಚ್ ಓಪನ್ ಮಹಿಳಾ ಸ್ಕ್ವಾಷ್ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಭಾನುವಾರ ನಡೆದ ಫೈನಲ್‌ನಲ್ಲಿ ಅನಕಾ 11-8, 13-11, 11-5 ರಲ್ಲಿ ನ್ಯೂಜಿಲೆಂಡ್‌ನ ಕೈಲೀ ಲಿಂಡ್ಸೆ ಅವರನ್ನು ಮಣಿಸಿದರು. ಭಾರತದ 18ರ ಹರೆಯದ ಸ್ಪರ್ಧಿಗೆ ಮಹಿಳೆಯರ ವೃತ್ತಿಪರ ಟೂರ್‌ನಲ್ಲಿ ದೊರೆತ ಎರಡನೇ ಪ್ರಶಸ್ತಿ ಇದು. ಆದೇ ರೀತಿ ಅನಕಾ ವಿದೇಶಿ ನೆಲದಲ್ಲಿ ಇದೇ ಮೊದಲ ಬಾರಿ ಚಾಂಪಿಯನ್ ಆಗಿದ್ದಾರೆ.


ಏಷ್ಯನ್ ಜೂನಿಯರ್ ಟೂರ್ನಿಯಲ್ಲಿ ಸ್ವರ್ಣ ಜಯಿಸಿದ್ದ ಅನಕಾ ಚೆನ್ನೈನಲ್ಲಿರುವ ಇಂಡಿಯನ್ ಸ್ಕ್ವಾಷ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವಿಶ್ವ ರ‌್ಯಾಂಕಿಂಗ್‌ನಲ್ಲಿ 93ನೇ ಸ್ಥಾನದಲ್ಲಿರುವ ಅವರು ಸೆಮಿಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ದಕ್ಷಿಣ ಆಫ್ರಿಕಾದ ಚೆನ್ಯಾ ಟಕರ್ ವಿರುದ್ಧ ಗೆಲುವು ಪಡೆದಿದ್ದರು.

ಅನಕಾ ಫೈನಲ್ ಪಂದ್ಯದ ಮೂರೂ ಸೆಟ್‌ಗಳಲ್ಲಿ ಪೂರ್ಣ ಹಿಡಿತ ಸಾಧಿಸಿದ್ದರು. ಇದರಿಂದ ಸುಲಭ ಗೆಲುವು ತಮ್ಮದಾಗಿಸಿಕೊಂಡರು. `ಈ ಟೂರ್ನಿಯಲ್ಲಿ ನನಗೆ ಏಳನೇ ಶ್ರೇಯಾಂಕ ಲಭಿಸಿತ್ತು. ಆದರೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರುವುದು ಸಂತಸ ಉಂಟುಮಾಡಿದೆ~ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

`ಸೆಮಿಫೈನಲ್ ಹಾಗೂ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಐದು ಸೆಟ್‌ಗಳ ಹೋರಾಟ ನಡೆಸಿದ್ದೆ. ಇದರಿಂದ ಹೆಚ್ಚಿನ ಸಮಯ ಕೋರ್ಟ್‌ನಲ್ಲಿ ಕಳೆಯಬೇಕಾಗಿ ಬಂದಿತ್ತು. ಇದರ ನಡುವೆಯೂ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ~ ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT