ADVERTISEMENT

ಸ್ಟ್ಯಾಂಡ್‌ಗೆ ಒಡೆಯರ್‌ ಹೆಸರು?

ಎರಡು ವಾರಗಳಲ್ಲಿ ಕೆಎಸ್‌ಸಿಎಗೆ ನೂತನ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಒಂದು ಸ್ಟ್ಯಾಂಡ್‌ಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಹೆಸರಿಡಲು ನೂತನ ಆಡಳಿತ ಮಂಡಳಿಯು ಚಿಂತನೆ ನಡೆಸಿದೆ.

ಹೃದಯಾಘಾತದಿಂದ ನಿಧನರಾದ ಒಡೆಯರ್‌ಗೆ ಸಂತಾಪ ಸೂಚಿಸಲು ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಆಡಳಿತ ಮಂಡಳಿಯ ಕೆಲ ಸದಸ್ಯರು ಈ ಬಗ್ಗೆ ಸಲಹೆ ನೀಡಿದರು ಎಂದು ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ್‌ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಕೆಎಸ್‌ಸಿಎ ಅಧ್ಯಕ್ಷರಾಗಿ ಒಡೆಯರ್‌ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಂತಾಪ ಸೂಚನಾ ಸಭೆಯಲ್ಲಿ ನೆನಪಿಸಿಕೊಳ್ಳಲಾಯಿತು. ಕ್ರೀಡಾಂಗಣದ ಒಂದು ಸ್ಟ್ಯಾಂಡ್‌ಗೆ ಅವರ ಹೆಸರು ಇಡಬೇಕು ಎಂಬುದರ ಬಗ್ಗೆ ಕೆಲವರು ಸಲಹೆ ನೀಡಿದರು. ಆದರೆ ಅಂತಿಮ ತೀರ್ಮಾನವನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದರು.

ಈ ಸಭೆ ಹಿರಿಯ ಉಪಾಧ್ಯಕ್ಷ ಪಿ.ಆರ್‌.ಅಶೋಕಾನಂದ ಅವರ ನೇತೃತ್ವದಲ್ಲಿ ನಡೆಯಿತು. ಮೊದಲ ಬಾರಿ ನಡೆದ ಸಭೆಯಲ್ಲಿ ಕಾರ್ಯ ದರ್ಶಿ ಬ್ರಿಜೇಶ್‌ ಪಟೇಲ್‌ ಸೇರಿದಂತೆ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು. ಆದರೆ ಒಡೆಯರ್‌ ನಿಧನದಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ನೇಮಕದ ಬಗ್ಗೆ ಚರ್ಚೆ ನಡೆದಿಲ್ಲ ಎಂಬುದು ತಿಳಿದುಬಂದಿದೆ. ‘ಎರಡು ವಾರಗಳಲ್ಲಿ ಈ ಸಂಬಂಧ ನಿರ್ಧಾರ ಹೊರಬೀಳಲಿದೆ’ ಎಂದು ಮೃತ್ಯುಂಜಯ್‌ ತಿಳಿಸಿದರು.

ಒಡೆಯರ್‌ 2007ರಿಂದ 2010ರವರೆಗೆ ಮೊದಲ ಬಾರಿ ಅಧ್ಯಕ್ಷರಾಗಿದ್ದರು. ಸಂಸ್ಥೆಗೆ ನಡೆದ ಈ ಬಾರಿಯ ಚುನಾವಣೆಯಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಅಶೋಕಾನಂದ ಅವರು ಅಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಎಸ್‌ಸಿಎ ‘ಬೈಲಾ’ದ 18ನೇ ಕಲಂ  ಪ್ರಕಾರ ಆಡಳಿತ ಮಂಡಳಿಯಲ್ಲಿರುವ ಆಜೀವ ಸದಸ್ಯರು ಅಧ್ಯಕ್ಷರಾಗಿ ಬಡ್ತಿಗೇರಲು ಅವಕಾಶ ಹೊಂದಿದ್ದಾರೆ.

ಆಯ್ಕೆ ಸಮಿತಿಗೆ ಅಶೋಕಾನಂದ ಮುಖ್ಯಸ್ಥ

ರಾಜ್ಯ ಕ್ರಿಕೆಟ್‌ ತಂಡದ ಸೀನಿಯರ್‌ ಆಯ್ಕೆ ಸಮಿತಿಗೆ ಪಿ.ಆರ್‌.ಅಶೋಕಾನಂದ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅನಿಲ್‌ ಕುಂಬ್ಳೆ ಆಡಳಿತದ ಅವಧಿಯಲ್ಲಿದ್ದ ಜೆ.ಅಭಿರಾಮ್‌ ಸ್ಥಾನಕ್ಕೆ ಈ ನೇಮಕ ನಡೆದಿದೆ.

ಸಮಿತಿಯಲ್ಲಿರುವ ಇತರ ಸದಸ್ಯರೆಂದರೆ ಸಂಜಯ್‌ ದೇಸಾಯಿ, ಫಜಲ್‌ ಖಲೀಲ್‌ ಹಾಗೂ ದೊಡ್ಡ ಗಣೇಶ್‌.

19 ವರ್ಷದೊಳಗಿನವರ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ರಣಜಿ ತಂಡದ ಮಾಜಿ ವಿಕೆಟ್‌ ಕೀಪರ್‌ ತಿಲಕ್‌ ನಾಯ್ಡು ಅವರನ್ನು ನೇಮಿಸಲಾಗಿದೆ. ಎಡಗೈ ಸ್ಪಿನ್ನರ್‌ ರಘುರಾಮ್‌ ಭಟ್‌ ಅವರು 14, 16, 22 ಹಾಗೂ 25 ವರ್ಷದೊಳಗಿನವರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT