ADVERTISEMENT

ಸ್ಯಾಮಿಗೆ ನಿರಾಶೆ, ಸ್ಮಿತ್‌ಗೆ ಹರ್ಷ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:25 IST
Last Updated 24 ಫೆಬ್ರುವರಿ 2011, 18:25 IST

ನವದೆಹಲಿ: ವೆಸ್ಟ್‌ಇಂಡೀಸ್ ನಾಯಕ ಡರೆನ್ ಸ್ಯಾಮಿ ಅವರಿಗೆ ಬಹಳ ನಿರಾಶೆಯಾಗಿತ್ತು. ದಕ್ಷಿಣ ಆಫ್ರಿಕ ಕೈಲಿ ಏಳು ವಿಕೆಟ್‌ಗಳಿಂದ ಸೋತ ನಂತರ, ‘ನಮ್ಮ ಒಬ್ಬ ಎ.ಬಿ. ಡಿವಿಲಿಯರ್ಸ್‌ನಂತೆ ಆಡಿದ್ದರೆ ಪಂದ್ಯದ ಫಲಿತಾಂಶ ಬದಲಾಗಬಹುದಿತ್ತು’ ಎಂದು ಪತ್ರಕರ್ತರೆದುರು ಹೇಳಿದರು.

“ಡರೆನ್ ಬ್ರಾವೊ ಚೆನ್ನಾಗಿ ಆಡಿದರಾದರೂ ಉಳಿದವರಿಂದ ಅದೇ ಆಟ ಮುಂದುವರಿಯಲಿಲ್ಲ. ನಾವು 270 ಕ್ಕೂ ಹೆಚ್ಚು ರನ್ ಗಳಿಸಬೇಕಿತ್ತು. ಡರೆನ್ ಕೂಡ ಅರ್ಧ ಶತಕ ದಾಟಿದ ಮೇಲೆ ನೂರರ ಮೇಲೆ ಕಣ್ಣಿಡಬೇಕಿತ್ತು. ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಆಡಬೇಕಿದೆ” ಎಂದೂ ಸ್ಯಾಮಿ ಹೇಳಿದರು.

ಗೆಲುವಿನ ಖುಷಿಯಿಂದಲೇ ಮಾತು ಆರಂಭಿಸಿದ ದಕ್ಷಿಣ ಆಫ್ರಿಕ ನಾಯಕ ಗ್ರೇಮ್ ಸ್ಮಿತ್, “ಕಳೆದ ಒಂದು ವಾರದಿಂದ ಜೊಹಾನ್ ಬೋಥಾ ಅವರೊಂದಿಗೆ ದಾಳಿ ಆರಂಭಿಸುವ ಯೋಚನೆ ಮಾಡಿದ್ದೆವು. ವಿಂಡೀಸ್ ತಂಡದ ಆರಂಭ ಆಟಗಾರರಿಬ್ಬರೂ ಎಡಗೈ ಬ್ಯಾಟ್ಸಮನ್ನರಾದ್ದರಿಂದ ಆಫ್‌ಸ್ಪಿನ್ನರ್ ಬೋಥಾ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸಿದರು.

ಇದು ನಿರೀಕ್ಷಿತ ಫಲ ನೀಡಿತು. ಹೊಸ ಆಟಗಾರ, ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಕೂಡ ಚೆನ್ನಾಗಿ ಬೌಲ್ ಮಾಡಿ, ಪ್ರಮುಖ ವಿಕೆಟ್‌ಗಳನ್ನು ಪಡೆದರು” ಎಂದು ಹೇಳಿದರು.

“ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿತ್ತು. ಎರಡು ವಿಕೆಟ್‌ಗಳು ಬೇಗ ಬಿದ್ದಾಗ ಸ್ವಲ್ಪ ಒತ್ತಡದಲ್ಲಿ ಸಿಲುಕಿದ್ದೆವಾದರೂ ಡಿವಿಲಿಯರ್ಸ್ ಅಮೋಘ ಆಟ ಅದನ್ನು ನಿವಾರಿಸಿತು” ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.