ADVERTISEMENT

ಹಾಕಿ: ಇಂಗ್ಲೆಂಡ್‌ಗೆ ಮಣಿದ ಭಾರತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ಸ್ಪೇನ್ (ಪಿಟಿಐ): ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸಹ ಭಾರತ ಹಾಕಿ ತಂಡ ಇಲ್ಲಿ ಆರಂಭವಾದ ಮೂರು ರಾಷ್ಟ್ರಗಳ ನಡುವಿನ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ 1-3 ಗೋಲುಗಳಿಂದ ಇಂಗ್ಲೆಂಡ್ ಎದುರು ಸೋಲು ಕಂಡಿತು.

ಶಿವೇಂದರ್ ಸಿಂಗ್ ಮೂರನೇ ನಿಮಿಷದಲ್ಲಿ ಗೋಲು ಕಲೆ ಹಾಕಿದ್ದರಿಂದ ಭಾರತ ಆರಂಭದಲ್ಲಿ ಮುನ್ನಡೆ ಸಾಧಿಸಿತು. ಈ ಗೋಲು ಬಂದು ಎರಡು ನಿಮಿಷದ ಅಂತರದಲ್ಲಿ ಎದುರಾಳಿ ಇಂಗ್ಲೆಂಡ್‌ಗೆ ಗೋಲು ಗಳಿಸುವ ಅವಕಾಶ ಲಭಿಸಿತ್ತು. ಆದರೆ, ನಾಯಕ ಹಾಗೂ ಗೋಲ್ ಕೀಪರ್ ಭರತ್ ಚೆಟ್ರಿ ಅದನ್ನು ವಿಫಲಗೊಳಿಸಿದರು.

ಇಂಗ್ಲೆಂಡ್‌ನ ಜೇಮ್ಸ ತಿಂಡಲ್ 17ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದ್ದರಿಂದ ಉಭಯ ತಂಡಗಳು ವಿರಾಮದ ವೇಳೆಗೆ 1-1ರಲ್ಲಿ ಸಮಬಲ ಸಾಧಿಸಿದವು. ದ್ವಿತೀಯಾರ್ಧದ ಪಂದ್ಯ ಆರಂಭವಾದ ಮೊದಲ ನಿಮಿಷದಲ್ಲಿಯೇ ತುಷಾರ್ ಖಾಂಡ್ಕರ್ ಗೋಲು ಗಳಿಸಲು ನಡೆಸಿದ ಯತ್ನಕ್ಕೆ ಎದುರಾಳಿ ತಂಡದ ಗೋಲ್ ಕೀಪರ್ ಜೇಮ್ಸ ಫೈರ್ ತಡೆಗೋಡೆಯಾದರು. ನಂತರ ಆ್ಯಷ್ಲೆ ಜಾಕ್ಸನ್ ಹಾಗೂ ಹ್ಯಾರಿ ಮಾರ್ಟಿನ್ ಅವರು ಕ್ರಮವಾಗಿ 45 ಮತ್ತು 62ನೇ ನಿಮಿಷದಲ್ಲಿ ಗಳಿಸಿ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಜಯ ತಂದುಕೊಟ್ಟರು.

ಸೋಮವಾರ ಸ್ಪೇನ್-ಇಂಗ್ಲೆಂಡ್ ಹಾಗೂ ಬುಧವಾರ (ಜುಲೈ 18) ಸ್ಪೇನ್ ವಿರುದ್ಧ ಭಾರತ ಪೈಪೋಟಿ ನಡೆಸಲಿದೆ. ಲಂಡನ್ ಒಲಿಂಪಿಕ್ಸ್ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿಯಿವೆ. ಆದ್ದರಿಂದ ಭಾರತಕ್ಕೆ ಇದು ಕೊನೆಯ ಅಭ್ಯಾಸ ಟೂರ್ನಿಯಾಗಿದೆ. ಶನಿವಾರ ಮಳೆ ಬಂದಿದ್ದು ಅಭ್ಯಾಸ ನಡೆಸಲು ಉಭಯ ತಂಡಗಳಿಗೂ ಅನುಕೂಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.