ADVERTISEMENT

ಹಾಕಿ: ಕೆಎಸ್‌ಪಿಗೆ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST
ಹಾಕಿ: ಕೆಎಸ್‌ಪಿಗೆ ಭರ್ಜರಿ ಗೆಲುವು
ಹಾಕಿ: ಕೆಎಸ್‌ಪಿಗೆ ಭರ್ಜರಿ ಗೆಲುವು   

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡದವರು ಕೊಡವ ಸಮಾಜ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ 15ನೇ ವರ್ಷದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೆಎಸ್‌ಪಿ 1-0ಗೋಲುಗಳಿಂದ ಎಂಇಜಿ `ಬಿ~ ತಂಡವನ್ನು ಮಣಿಸಿತು.

ವಿಜಯಿ ತಂಡದ ಪ್ರದೀಪ್ ಈ ಗೆಲುವಿನ ರೂವಾರಿಯೆನಿಸಿದರು. ಈ ಆಟಗಾರ 14ನೇ ನಿಮಿಷದಲ್ಲಿ ಗೋಲು ಗಳಿಸಿದರು. ಎದುರಾಳಿ ತಂಡಕ್ಕೆ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇನ್ನೊಂದು ಪಂದ್ಯದಲ್ಲಿ ಪಿಸಿಟಿಸಿ 3-1ಗೋಲುಗಳಿಂದ ಎಂಇಜಿ ಬಾಯ್ಸ ತಂಡವನ್ನು ಸೋಲಿಸಿತು.

ಎಂಇಜಿ ತಂಡದ ಬಿಕೆನ್ 8ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದು ಆರಂಭಿಕ ಮುನ್ನಡೆ ತಂದುಕೊಟ್ಟರು. ಇದಕ್ಕೆ ಉತ್ತಮ ಪೈಪೋಟಿ ಒಡ್ಡಿದ ವಿಜಯಿ ತಂಡದ ಸಚಿನ್ ಇಕ್ಕಾ 18ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಈ ವೇಳೆ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದವು. ಈ ವೇಳೆ ಚುರುಕಿನ ಪ್ರದರ್ಶನ ನೀಡಿದ ದಿನೇಶ್ ಕುಮಾರ್ 23ನೇ ನಿಮಿಷದಲ್ಲಿ ಗೋಲು ತಂದಿಟ್ಟು ಪಿಸಿಟಿಸಿ ತಂಡದ ಮುನ್ನಡೆಯನ್ನು 2-1ಕ್ಕೆ ಹೆಚ್ಚಿಸಿದರು.

 ಇದಕ್ಕೆ ಸಾಥ್ ನೀಡಿದ ಅನೂಪ್ ಕಜೂರ್ 40ನೇ ನಿಮಿಷದಲ್ಲಿ ಗೋಲು ತಂದಿಟ್ಟು ಅಂತರವನ್ನು 3-1ಕ್ಕೆ ಹೆಚ್ಚಿಸಿದರು. ದ್ವಿತೀಯಾರ್ಧದಲ್ಲಿ ಎಂಇಜಿ ತಂಡ ಮರು ಹೋರಾಟ ನಡೆಸಿದರೂ, ಗೋಲು ಗಳಿಸಲು ವಿಫಲವಾದರು.

ಆರ್ಮಿ ಗ್ರೀನ್‌ಗೆ ಸುಲಭ ಗೆಲುವು:
 ಏಕಪಕ್ಷೀಯವಾಗಿ ಕೊನೆಗೊಂಡ ಇನ್ನೊಂದು ಪಂದ್ಯದಲ್ಲಿ ಆರ್ಮಿ ಗ್ರೀನ್ ತಂಡ 6-0ಗೋಲುಗಳಿಂದ ಡಿವೈಎಸ್‌ಎಸ್ ಎದುರು ಸುಲಭವಾಗಿ ಗೆಲುವು ಸಾಧಿಸಿತು.

ಅರುಣ್ ಕುಮಾರ್ 7ನೇ ನಿಮಿಷದಲ್ಲಿ ಆರಂಭಿಕ ಗೋಲನ್ನು ತಂದಿಟ್ಟರು. ಇದೇ ಆಟಗಾರ 28ನೇ ನಿಮಿಷದಲ್ಲಿ ಇನ್ನೊಂದು ಗೋಲನ್ನು ಕಲೆ ಹಾಕಿದರು. ನಂತರ ಬಿನೋಯ್ (23ನೇ ನಿಮಿಷ), ಟಿ. ನೀರಜ್ (40ನೇ ನಿ.), ಲೀ ಜಾನ್ (41ನೇ ನಿ.), ಬಿರ್ಸು (47ನೇ ನಿ.) ಚೆಂಡನ್ನು ಗುರಿ ಸೇರಿಸಿ ಆರ್ಮಿ ತಂಡದ ಗೆಲುವಿಗೆ ಕಾರಣರಾದರು. ಈ ತಂಡ ವಿರಾಮದ ವೇಳೆಗೆ 3-0ರಲ್ಲಿ ಮುನ್ನಡೆ ಸಾಧಿಸಿತ್ತು.

ಗುರುವಾರದ ಪಂದ್ಯಗಳು: ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ)-ಕೆನರಾ ಬ್ಯಾಂಕ್ (ಮಧ್ಯಾಹ್ಯ 2.30ಕ್ಕೆ), ಎಎಸ್‌ಸಿ-ಡಿವೈಎಸ್‌ಎಸ್ (ಸಂಜೆ 4ಕ್ಕೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.