ADVERTISEMENT

ಹಾಕಿ: ಕೆನರಾ ಬ್ಯಾಂಕ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2010, 10:45 IST
Last Updated 29 ಡಿಸೆಂಬರ್ 2010, 10:45 IST
ಹಾಕಿ: ಕೆನರಾ ಬ್ಯಾಂಕ್‌ಗೆ ಜಯ
ಹಾಕಿ: ಕೆನರಾ ಬ್ಯಾಂಕ್‌ಗೆ ಜಯ   

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಕೆನರಾ ಬ್ಯಾಂಕ್ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದರು. ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕೆನರಾ ಬ್ಯಾಂಕ್ 5-3 ಗೋಲುಗಳಿಂದ ಎಚ್‌ಎಎಲ್ ತಂಡವನ್ನು ಮಣಿಸಿತು.  ವಿರಾಮದ ವೇಳೆಗೆ ಎರಡೂ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಆದರೆ ಎರಡನೇ ಅವಧಿಯಲ್ಲಿ ಅಕ್ರಮಣಕಾರಿ ಪ್ರದರ್ಶನ ನೀಡಿದ ಕೆನರಾ ಬ್ಯಾಂಕ್ ಮೂರು ಗೋಲುಗಳನ್ನು ಗಳಿಸಿತು.

ಮುದ್ದಪ್ಪ (3ನೇ ನಿಮಿಷ), ಅಪ್ಪಣ್ಣ (26), ಬಿಪಿನ್ ತಿಮ್ಮಯ್ಯ (49), ಜಾನ್ ವರ್ಗೀಸ್ (66) ಮತ್ತು ಸೋಮಣ್ಣ (69) ಅವರು ಕೆನರಾ ಬ್ಯಾಂಕ್ ಪರ ಗೋಲು ಗಳಿಸಿದರು. ಎಚ್‌ಎಎಲ್ ಪರ ವಿನೀತ್ ಮೈಕಲ್ (28) ಮತ್ತು ಮೊಹಮ್ಮದ್ ನಯೀಮುದ್ದೀನ್ (31 ಮತ್ತು 58) ಚೆಂಡನ್ನು ಗುರಿ ಸೇರಿಸಲು ಯಶಸ್ವಿಯಾದರು.ಎಂಇಜಿ ಮತ್ತು ಪಿಸಿಟಿಸಿ ತಂಡಗಳ ನಡುವಿನ ದಿನದ ಮತ್ತೊಂದು ಪಂದ್ಯ 2-2 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತು. ಚುರುಕಿನ ಆಟವಾಡಿದ ಸುನಿಲ್ ಕುಮಾರ್ ಎಕ್ಕಾ ಅವರು ಎರಡನೇ ನಿಮಿಷದಲ್ಲಿ ಪಿಸಿಟಿಸಿಗೆ ಮುನ್ನಡೆ ತಂದಿತ್ತರೆ, ಮುತ್ತಣ್ಣ 29ನೇ ನಿಮಿಷದಲ್ಲಿ ಎಂಇಜಿಗೆ ಸಮಬಲದ ಗೋಲು ತಂದಿತ್ತರು.ಎಸ್. ಜಯಶೀಲನ್ ಅವರು 60ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಎಂಇಜಿಗೆ 2-1 ರ ಮೇಲುಗೈ ತಂದಿತ್ತರು. ಆದರೆ 70ನೇ ನಿಮಿಷದಲ್ಲಿ ಎಸ್. ಕುಜೂರ್ ಗೋಲು ಗಳಿಸಿ ಪಿಸಿಟಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರಲ್ಲದೆ, ಎಂಇಜಿಯ ಗೆಲುವಿಗೆ ಅಡ್ಡಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.