ADVERTISEMENT

ಹಾಕಿ: ಪಾಕಿಸ್ತಾನ ಪ್ರವಾಸಕ್ಕೆ ತೆರಳಲಿರುವ ಭಾರತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

 ನವದೆಹಲಿ (ಪಿಟಿಐ): ಎಸ್.ಕೆ.ಉತ್ತಪ್ಪ ಸೇರಿದಂತೆ ಕರ್ನಾಟಕದ ಆರು ಮಂದಿ ಆಟಗಾರರು ಪಾಕಿಸ್ತಾನದಲ್ಲಿ ನಡೆಯಲಿರುವ ಮೂರು ದೇಶಗಳ ಹಾಕಿ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ `ಡೆವಲಪ್‌ಮೆಂಟಲ್~ ಹಾಕಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ತಂಡದ ನಾಯಕತ್ವವನ್ನು ಮಿಡ್‌ಫೀಲ್ಡರ್ ಗುರ್ಬಾಜ್ ಸಿಂಗ್ ವಹಿಸಲಿದ್ದಾರೆ.

ಲಂಡನ್ ಒಲಿಂಪಿಕ್ಸ್‌ಗಾಗಿ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ 48 ಮಂದಿಯ ಆಟಗಾರರ ಸಂಭವನೀಯ ಪಟ್ಟಿಯಿಂದ ಈ ತಂಡವನ್ನು ಆಯ್ಕೆ ಮಾಡಲಾಗಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

ಪ್ರಧಾನ್ ಸೋಮಣ್ಣ, ನಿತಿನ್ ತಿಮ್ಮಯ್ಯ, ಎಂ.ಬಿ.ಅಯ್ಯಪ್ಪ, ಎಂ.ಜಿ.ಪೂಣಚ್ಚ ಹಾಗೂ         ಪಿ.ಎಲ್.ತಿಮ್ಮಣ್ಣ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ರಾಜ್ಯದ ಇನ್ನಿತರ ಆಟಗಾರರು. ಈ ಟೂರ್ನಿ ಏಪ್ರಿಲ್ 9ರಂದು ಆರಂಭವಾಗಲಿದೆ. ಇದರಲ್ಲಿ ಭಾರತ, ಪಾಕ್ ಹಾಗೂ ಮಲೇಷ್ಯಾ ತಂಡಗಳು ಪೈಪೋಟಿ ನಡೆಸಲಿವೆ. ಆದರೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕ್‌ಗೆ ತೆರಳಲು ಕೇಂದ್ರ ಸರ್ಕಾರದಿಂದ ಇನ್ನೂ ಅನುಮತಿ ಲಭಿಸಿಲ್ಲ.

ಕೋಚ್ ಮೈಕಲ್ ನಾಬ್ಸ್, ಆಯ್ಕೆದಾರರಾದ ಬಿ.ಪಿ.ಗೋವಿಂದ ಹಾಗೂ ಸೈಯದ್ ಅಲಿ ಹಾಗೂ ಸರ್ಕಾರದ ವೀಕ್ಷಕರಾದ ಹರ್ವೀಂದರ್ ಸಿಂಗ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು ತಂಡ ಆಯ್ಕೆ ಮಾಡಿದೆ. ಎಸ್‌ಎಐನಲ್ಲಿ ನಡೆದ ಎರಡು ದಿನಗಳ ಆಯ್ಕೆ ಟ್ರಯಲ್ಸ್ ಬಳಿಕ ತಂಡ ಆಯ್ಕೆ ಮಾಡಲಾಗಿದೆ.

ಭಾರತ ತಂಡ ಇಂತಿದೆ: ಗೋಲ್ ಕೀಪರ್: ಪಿ.ಟಿ.ರಾವ್, ನಾನಕ್ ಸಿಂಗ್. ಡಿಫೆಂಡರ್:  ರೂಪಿಂದರ್‌ಪಾಲ್ ಸಿಂಗ್, ಹರ್ಬಿರ್ ಸಿಂಗ್, ಅಮಿತ್ ರೋಹಿಡಾಸ್ ಮಿಡ್‌ಫೀಲ್ಡರ್: ಗುರ್ಬಾಜ್ ಸಿಂಗ್ (ನಾಯಕ), ಮನ್‌ಪ್ರೀತ್ ಸಿಂಗ್ (ಉಪನಾಯಕ), ಕೊತಾಜಿತ್ ಸಿಂಗ್ ಖಡಂಗಬಮ್, ಗುರ್ಮೇಲ್ ಸಿಂ, ಎಂ.ಬಿ.ಅಯ್ಯಪ್ಪ, ಎಸ್.ಕೆ.ಉತ್ತಪ್ಪ, ಧರ್ಮವೀರ್    ಸಿಂಗ್, ನಿತಿನ್ ತಿಮ್ಮಯ್ಯ.     ಫಾರ್ವರ್ಡ್: ಚಿಂಗ್ಲಿನ್‌ಸನಾ ಸಿಂಗ್, ಅಕ್ಷದೀಪ್ ಸಿಂಗ್, ಪ್ರಧಾನ್ ಸೋಮಣ್ಣ, ಪಿ.ಎಲ್.ತಿಮ್ಮಣ್ಣ, ಎಂ.ಜಿ.ಪೂಣಚ್ಚ.   

ಕಾಯ್ದಿರಿಸಿದ ಆಟಗಾರರು: ರಾಹುಲ್ ಶಿಲ್ಪಕರ್    (ಡಿಫೆನ್ಸ್), ಸ್ಟ್ಯಾನ್ಲಿ ವಿಕ್ಟರ್ ಮಿನ್ಜ್, ರಾಕಿ ಲೊಚಬ್ (ಮಿಡ್‌ಫೀಲ್ಡರ್), ಮನ್‌ದೀಪ್ ಸಿಂಗ್ (ಫಾರ್ವರ್ಡ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.