ADVERTISEMENT

ಹಾಕಿ: ಫೈನಲ್‌ಗೆ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಆತಿಥೇಯ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ 25ನೇ ಅಖಿಲ ಭಾರತ ಪೋಸ್ಟಲ್ ಹಾಕಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ 3-0ಗೋಲುಗಳಿಂದ ಪಂಜಾಬ್ ತಂಡವನ್ನು ಮಣಿಸಿತು.

ಈ ಪಂದ್ಯದ ಗೆಲುವಿನಲ್ಲಿ ಸಿ. ಪ್ರಕಾಶ್ ಪ್ರಧಾನ ಪಾತ್ರ ವಹಿಸಿದರು. ಈ ಆಟಗಾರ 47 ಹಾಗೂ 53ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿದರು. ಇದಕ್ಕೂ ಮುನ್ನ ಕುಮನನ್ 42ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು.
ಪ್ರಥಮಾರ್ಧದ ವೇಳೆಗೆ ಉಭಯ ತಂಡಗಳಿಂದ ಯಾವುದೇ ಗೋಲುಗಳು ಬಂದಿರಲಿಲ್ಲ. ನಂತರ ಆತಿಥೇಯರು ಚುರುಕಿನ ಆಟವಾಡಿ ಪ್ರಶಸ್ತಿ ಸನಿಹ ಹೆಜ್ಜೆ ಹಾಕಿದರು.

ಕರ್ನಾಟಕ ಫೈನಲ್‌ನಲ್ಲಿ ಮಧ್ಯ ಪ್ರದೇಶ ವಿರುದ್ಧ ಪೈಪೋಟಿ ನಡೆಸಲಿದೆ. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಮಧ್ಯಪ್ರದೇಶ 4-2ಗೋಲುಗಳಿಂದ ತಮಿಳುನಾಡು ತಂಡವನ್ನು ಮಣಿಸಿತು.

ವಿಜಯಿ ತಂಡದ ಸಿರಾಜ್ ಉಲ್ ಹಕ್ 32ನೇ ನಿಮಿಷದಲ್ಲಿ ಗೋಲಿನ ಖಾತೆ ಆರಂಭಿಸಿದರು. ಈ ಗೋಲು ಬಂದು ಒಂಬತ್ತು ನಿಮಿಷಗಳ ನಂತರ ಇದೇ ಆಟಗಾರ ಮತ್ತೊಂದು ಗೋಲು ಗಳಿಸಿದರು. ಸಾಧಿಕ್ ನೂರ್ (37ನೇ ನಿಮಿಷ), ಅಸದ್ ಕಮಲ್ (39ನೇ ನಿ.) ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು.

ತಮಿಳುನಾಡಿನ ಪ್ರೇಮ್ ಕುಮಾರ್ ಹಾಗೂ ಜಯ ಪ್ರಕಾಶ್ ಕ್ರಮವಾಗಿ 5 ಮತ್ತು 53ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಸೆಮಿಫೈನಲ್‌ನಲ್ಲಿ ಸೋಲು ಕಂಡ ಪಂಜಾಬ್ ಹಾಗೂ ತಮಿಳುನಾಡು ತಂಡಗಳು ಮೂರನೇ ಸ್ಥಾನಕ್ಕಾಗಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಕರ್ನಾಟಕ- ಮಧ್ಯಪ್ರದೇಶ ಫೈನಲ್ ಪಂದ್ಯ ಬೆಳಿಗ್ಗೆ 9.30ಕ್ಕೆ  ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.