ADVERTISEMENT

ಹಾಕಿ: ಮಹಿಳೆಯರಿಗೆ ಆಘಾತ

ಪಿಟಿಐ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಹಾಕಿ ಇಂಡಿಯಾ ಟ್ವಿಟರ್‌ ಚಿತ್ರ.
ಹಾಕಿ ಇಂಡಿಯಾ ಟ್ವಿಟರ್‌ ಚಿತ್ರ.   

ಸೋಲ್‌: ಮೊದಲ ಎರಡು ಪಂದ್ಯಗಳಲ್ಲಿ ಅಮೋಘ ಆಟ ಆಡಿದ ಭಾರತ ಮಹಿಳಾ ತಂಡದವರು ದಕ್ಷಿಣ ಕೊರಿಯಾ ಎದುರಿನ ಹಾಕಿ ಸರಣಿಯಲ್ಲಿ ಮೊದಲ ಆಘಾತ ಅನುಭವಿಸಿದ್ದಾರೆ. ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಗುರುವಾರ 1–2 ಗೋಲುಗಳಿಂದ ಸೋತಿದೆ.

ಜಿಂಚುನ್ ರಾಷ್ಟ್ರೀಯ ಕ್ರೀಡಾ ಕೇಂದ್ರದ ಅಂಗಣದಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಸಿಯುಲ್ ಕಿ ಚಾನ್‌ (12ನೇ ನಿಮಿಷ) ಮತ್ತು ಯೂರಿಮ್ ಲೀ (14ನೇ ನಿ) ಗಳಿಸಿದ ಗೋಲುಗಳು ಆತಿಥೇಯರ ಗೆಲುವಿಗೆ ಕಾರಣವಾದವು. ಉತ್ತಮ ಹೋರಾಟ ನಡೆಸಿದ ಭಾರತದ ಪರ ಲಾಲ್‌ರೆಮ್ಸಿಯಾಮಿ (16ನೇ ನಿಮಿಷ) ಗೋಲು ಗಳಿಸಿದರು.

ಗೆಲುವಿನ ಓಟ ಮುಂದುವರಿಸುವ ಭರವಸೆಯಿಂದ ಕಣಕ್ಕೆ ಇಳಿದ ಭಾರತದ ಮಹಿಳೆಯರು ಆರಂಭದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರು. ದಕ್ಷಿಣ ಕೊರಿಯಾ ಪ್ರತಿಹೋರಾಟ ನಡೆಸಿದ್ದರಿಂದ ಮೊದಲ ಕ್ವಾರ್ಟರ್‌ ಜಿದ್ದಾಜಿದ್ದಿಗೆ ಕಾರಣವಾಯಿತು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಚಾನ್ ಮತ್ತು ಲೀ  ಆತಿಥೇಯರ ಮುನ್ನಡೆಗೆ ಕಾರಣರಾದರು.

ADVERTISEMENT

ಎರಡನೇ ಕ್ವಾರ್ಟರ್‌ನ ಆರಂಭದಲ್ಲಿ ಪ್ರಬಲ ಹೋರಾಟ ನಡೆಸಿದ ಭಾರತಕ್ಕೆ ಫಲ ಸಿಕ್ಕಿತು. ನಂತರವೂ ಭಾರತ ಆಧಿಪತ್ಯ ಸ್ಥಾಪಿಸಿತು. ಅನೇಕ ಬಾರಿ ಎದುರಾಳಿ ತಂಡದ ಗೋಲುಪೆಟ್ಟಿಗೆ ಬಳಿ ಒತ್ತಡ ಹೆಚ್ಚಿಸಿದರು. ಆದರೆ ಆ ತಂಡದ ರಕ್ಷಣಾ ಗೋಡೆ ಭೇದಿಸಿ ಗೋಲು ಗಳಿಸಲು ಆಗಲಿಲ್ಲ.

ನಿರ್ಣಾಯಕ ನಾಲ್ಕನೇ ಪಂದ್ಯ ಶುಕ್ರವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.