ADVERTISEMENT

ಹಾಕಿ: ಸೆಮಿಫೈನಲ್ ಮೇಲೆ ಭಾರತ ಕಣ್ಣು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2016, 19:30 IST
Last Updated 13 ಆಗಸ್ಟ್ 2016, 19:30 IST
ರೋಲಂಟ್‌ ಓಲ್ಟಮನ್ಸ್‌
ರೋಲಂಟ್‌ ಓಲ್ಟಮನ್ಸ್‌   

ರಿಯೊ ಡಿ ಜನೈರೊ (ಪಿಟಿಐ): ಲೀಗ್‌ನಲ್ಲಿ ಏಳುಬೀಳುಗಳನ್ನು ಅನುಭವಿಸಿ ನಾಕೌಟ್‌ ಹಂತ ಪ್ರವೇಶಿಸಿರುವ ಭಾರತ ಹಾಕಿ ತಂಡದ ಮುಂದೆ ಈಗ ಹೊಸ ಸವಾಲು ಎದುರಾಗಿದೆ. ರಿಯೊ ಒಲಿಂಪಿಕ್ಸ್‌ನ ಪುರುಷರ ವಿಭಾಗದ ಮೊದಲ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಪಿ.ಆರ್‌. ಶ್ರೀಜೇಶ್‌ ನಾಯಕತ್ವದ ತಂಡ ಬೆಲ್ಜಿಯಂ ವಿರುದ್ಧ ಪೈಪೋಟಿ ನಡೆಸಲಿದೆ.

ಹಿಂದಿನ ಎರಡು ವರ್ಷಗಳ ಪ್ರಮುಖ ಟೂರ್ನಿಗಳಲ್ಲಿ ಪ್ರಾಬಲ್ಯ ಮೆರೆ ದಿರುವ ಭಾರತ ತಂಡ ಲೀಗ್ ಹಂತದಲ್ಲಿ ಆಡಿದ ಐದು ಪಂದ್ಯಗಳಲ್ಲಿ ಎರಡ ರಲ್ಲಷ್ಟೇ ಗೆಲುವು ಪಡೆದಿದೆ. ವಿಶ್ವ ರ್‍ಯಾಂಕ್‌ನಲ್ಲಿ ಐದನೇ ಸ್ಥಾನದಲ್ಲಿರುವ ಶ್ರೀಜೇಶ್‌ ಪಡೆ ಶುಕ್ರವಾರ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅಷ್ಟೇನು ಬಲಿಷ್ಠವಲ್ಲದ ಕೆನಡಾ ವಿರುದ್ಧ ಗೆಲುವಿನ ಅವಕಾಶವನ್ನು ಹಾಳುಮಾಡಿಕೊಂಡಿತ್ತು.

ಐರ್ಲೆಂಡ್ ಮತ್ತು ಅರ್ಜೆಂಟೀನಾ ವಿರುದ್ಧದ ಲೀಗ್ ಪಂದ್ಯಗಳಲ್ಲಿ ಭಾರತ ಗೆಲುವು ಪಡೆದಿತ್ತಾದರೂ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಬಳಸಿಕೊಳ್ಳವಲ್ಲಿ ಪದೇ ಪದೇ ಎಡವಿತ್ತು. ಅಷ್ಟೇ ಅಲ್ಲ ಕೆನಡಾ ವಿರುದ್ಧ ರಕ್ಷಣಾ ವಿಭಾಗ ಕೂಡ ಬಲಿಷ್ಠವಾಗಿರಲಿಲ್ಲ. ಆದ್ದರಿಂದ ಗುಂಪು ಹಂತದಿಂದ ಆದ ತಪ್ಪುಗಳಿಂದ ಪಾಠ ಕಲಿತು ನಾಕೌಟ್‌ನಲ್ಲಿ ಅತ್ಯಂತ ಎಚ್ಚರಿಕೆಯಿಂದ ಆಡಬೇಕಾದ ಸವಾಲು ಭಾರತದ ಆಟಗಾರರ ಮೇಲಿದೆ.

ಲೀಗ್‌ನ ಒಂದು ಪಂದ್ಯದಲ್ಲಿ ತಪ್ಪಾಗಿದ್ದರೂ ತಿದ್ದಿಕೊಳ್ಳಲು ಅವಕಾಶವಿರು ತ್ತಿತ್ತು. ಆದರೆ ಈಗ ನಾಕೌಟ್‌ನಲ್ಲಿ ಗೆದ್ದರಷ್ಟೇ ಸೆಮಿಫೈನಲ್‌. ಇಲ್ಲವಾದರೆ ಪದಕದ ಸ್ಪರ್ಧೆಯಿಂದ ಹೊರಬೀಳಬೇಕಾಗುತ್ತದೆ. ಒಟ್ಟು ಏಳು ಪಾಯಿಂಟ್ಸ್‌ನಲ್ಲಿ ಭಾರತ ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು.

ರಘುನಾಥ್‌ ಮೇಲೆ ಭರವಸೆ: ಲೀಗ್ ಹಂತದಲ್ಲಿ ತಲಾ ಮೂರು ಗೋಲುಗಳನ್ನು ಹೊಡೆದಿರುವ ರೂಪಿಂದರ್‌ ಪಾಲ್‌ ಸಿಂಗ್ ಮತ್ತು ಕರ್ನಾಟಕದ ವಿ.ಆರ್‌. ರಘುನಾಥ್‌ ಮೇಲೆ ಹೆಚ್ಚು ನಿರೀಕ್ಷೆಯಿದೆ.

ಹಿಂದಿನ ಮುಖಾಮುಖಿಯಲ್ಲಿ ಸೋಲು
ಉಭಯ ತಂಡಗಳು ಹೋದ ವರ್ಷ ರಾಯಪುರ ನಡೆದ ವಿಶ್ವ ಹಾಕಿ ಲೀಗ್‌ನಲ್ಲಿ ಪೈಪೋಟಿ ನಡೆಸಿದ್ದವು. ಆಗ ಭಾರತ 1–2 ಗೋಲುಗಳಿಂದ ಸೋತಿತ್ತು.

36 ವರ್ಷಗಳಿಂದ ಸೆಮಿ ಇಲ್ಲ
ಭಾರತ ತಂಡ ಒಲಿಂಪಿಕ್ಸ್‌ನಲ್ಲಿ 36 ವರ್ಷಗಳಿಂದ ಒಮ್ಮೆಯೂ ಸೆಮಿಫೈನಲ್‌  ಪ್ರವೇಶಿಸಿಲ್ಲ. 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದೇ ಕೊನೆ.

***
ಪೆನಾಲ್ಟಿ ಕಾರ್ನರ್‌ನಲ್ಲಿ ಪದೇ ಪದೇ ತಪ್ಪು ಮಾಡುತ್ತಿದ್ದೇವೆ. ಆದ್ದರಿಂದ ಜಯಕ್ಕಾಗಿ ಕಷ್ಟಪಡಬೇಕಾಗಿದೆ. ನಾಕೌಟ್‌ನಲ್ಲಿ ಹಿಂದಿನ ತಪ್ಪಾಗದಂತೆ ಎಚ್ಚರ ವಹಿಸುತ್ತೇವೆ.
-ರೋಲಂಟ್‌ ಓಲ್ಟಮನ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.