ಮುಂಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ 92 ವರ್ಷದ ಮಾಧವ್ ಕೃಷ್ಣಾಜಿ ಮಂತ್ರಿ ಅವರು ಶುಕ್ರವಾರ ಬೆಳಿಗ್ಗೆ ಇಲ್ಲಿ ನಿಧನ ಹೊಂದಿದ್ದಾರೆ.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದ ಮಾಧವ್ ಮಂತ್ರಿ 1951–1955ರ ಅವಧಿಯಲ್ಲಿ ನಾಲ್ಕು ಟೆಸ್ಟ್‌್ ಪಂದ್ಯ ಆಡಿದ್ದರು. ಮುಂಬೈನ ಬ್ರಬೋ ರ್ನ್ ಕ್ರೀಡಾಂಗಣದಲ್ಲಿ 1951ರಲ್ಲಿ ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ದ್ದರು. 1955ರಲ್ಲಿ ಪಾಕಿಸ್ತಾನದ ವಿರುದ್ಧ ಢಾಕಾದಲ್ಲಿ ಆಡಿದ್ದ ಪಂದ್ಯವೇ ಅವರ ಕೊನೆಯ ಟೆಸ್ಟ್ ಆಗಿತ್ತು. ನಾಲ್ಕು ಪಂದ್ಯಗಳಿಂದ ಒಟ್ಟು 67 ರನ್ ಗಳಿ ಸಿದ್ದರು. ಮಾಧವ್ ಮಂತ್ರಿ ಭಾರತ ಕ್ರಿಕೆ ಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರ ಸೋದರ ಮಾವ.
95 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಮಾಧವ್ ಮಂತ್ರಿ ಒಟ್ಟು 4403 ರನ್ ಕಲೆ ಹಾಕಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬೈ ತಂಡ (ಅಂದಿನ ಬಾಂಬೆ) ಮೂರು ಸಲ ರಣಜಿ ಟ್ರೋಫಿ ಗೆದ್ದುಕೊಂಡಿದೆ. 1948–49ರ ರಣಜಿ ಋತುವಿನ ಮಹಾರಾಷ್ಟ್ರ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ಮಾಧವ್ ಮಂತ್ರಿ ದ್ವಿಶತಕ ಗಳಿಸಿದ್ದು ಸ್ಮರಣೀಯ ಇನಿಂಗ್ಸ್‌್.
1964–65 ಮತ್ತು 1967–68ರ ಅವಧಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದರು. 1990ರಲ್ಲಿ ಮೊಹಮ್ಮದ್ ಅಜುರುದ್ದೀನ್ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ತಂಡಕ್ಕೆ ಮ್ಯಾನೇಜರ್ ಕೂಡಾ ಆಗಿದ್ದರು. ಜೊತೆಗೆ 1990–92ರಲ್ಲಿ ಬಿಸಿಸಿಐ ಖಜಾಂಚಿಯಾಗಿದ್ದರು.
‘ಮಾಧವ್ ಮಂತ್ರಿ ಅವರನ್ನು ಕಳೆದುಕೊಂಡಿದ್ದು ಭಾರತದ ಕ್ರಿಕೆಟ್ ರಂಗಕ್ಕೆ ಆದ ದೊಡ್ಡ ನಷ್ಟ’ ಎಂದು ಬಿಸಿಸಿಐ ಸಂತಾಪ ವ್ಯಕ್ತಪಡಿಸಿದೆ.
‘ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಮಾಧವ್ ಮಂತ್ರಿ ರಣಜಿ ಆಟಗಾರರಾಗಿ ಹೆಸರು ಮಾಡಿದ್ದರು. ಅವರ ಜೊತೆ ಕೆಲ ಸೌಹಾರ್ದ ಪಂದ್ಯಗಳಲ್ಲಿ ಆಡಿದ್ದೆ. ಅವರು ಅತ್ಯಂತ ಶಿಸ್ತಿನ ವ್ಯಕ್ತಿಯಾಗಿದ್ದರು’ ಎಂದು ಭಾರತ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಆ ದಿನಗಳನ್ನು ನೆನಪಿಸಿಕೊಂಡರು.
‘1966ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡದ ಆಯ್ಕೆ ನಡೆದಿತ್ತು. ಆಗ ಮನ್ಸೂರ್ ಅಲಿ ಖಾನ್ ಪಟೌಡಿ ಆಯ್ಕೆ ಸಮಿತಿಯಲ್ಲಿದ್ದರು. ಅವರು ನನ್ನನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಕೊನೆಗೆ ಪಟೌಡಿ ಅವರ ಮನವೊಲಿಸಿ ಮಾಧವ್ ಮಂತ್ರಿ ನನಗೆ ತಂಡದಲ್ಲಿ ಅವಕಾಶ ಸಿಗುವಂತೆ ಮಾಡಿದ್ದರು’ ಎಂದು ವಾಡೇಕರ್ ಚೆದುರಿನ ನೆನಪುಗಳನ್ನು ಒಂದುಗೂಡಿಸಿದರು.
‘ಮುಂಬೈ ಮತ್ತು ಭಾರತದ ಕ್ರಿಕೆಟ್ ರಂಗಕ್ಕೆ ಮಾಧವ್ ಮಂತ್ರಿ ಅಪಾರ ಕೊಡುಗೆ ನೀಡಿದ್ದಾರೆ. ಆಡಳಿತ ರಂಗದಲ್ಲೂ ಅವರು ಛಾಪು ಮೂಡಿಸಿದ್ದರು. ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಿದ್ದರು’ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಶರದ್ ಪವಾರ್ ಗುಣಗಾನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.