ADVERTISEMENT

ಹುಟ್ಟುಹಬ್ಬದ ಸಂಭ್ರಮ ಬೇಡ...

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2011, 19:00 IST
Last Updated 23 ಏಪ್ರಿಲ್ 2011, 19:00 IST
ಹುಟ್ಟುಹಬ್ಬದ ಸಂಭ್ರಮ ಬೇಡ...
ಹುಟ್ಟುಹಬ್ಬದ ಸಂಭ್ರಮ ಬೇಡ...   

ಹೈದರಾಬಾದ್ (ಪಿಟಿಐ):  ಸಚಿನ್ ತೆಂಡೂಲ್ಕರ್ ಅವರು ತಮ್ಮ 38ನೇ ಹುಟ್ಟುಹಬ್ಬದಂದು ಸಂಭ್ರಮ ಬೇಡವೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ಹೀಗೆ ಹೇಳಲು ಕಾರಣ ತಾವು ಅಪಾರವಾಗಿ ಆರಾಧಿಸುವ ಸತ್ಯ ಸಾಯಿಬಾಬಾ ಆರೋಗ್ಯ ಪರಿಸ್ಥಿತಿ ಇನ್ನೂ ಗಂಭೀರವಾಗಿರುವುದು. ಬಾಬಾ ಭಕ್ತ ಸಮೂಹದಲ್ಲಿ ಒಂದಾಗಿರುವ ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್ ಈಗ ಬೇಸರದಲ್ಲಿದ್ದಾರೆ. ಪುಟ್ಟಪರ್ತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಯಿಬಾಬಾ ಬೇಗ ಗುಣಮುಖರಾಗಬೇಕು ಎನ್ನುವುದೊಂದೇ ಅವರ ಪ್ರಾರ್ಥನೆಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಆಡಲು ಇಲ್ಲಿಗೆ ಆಗಮಿಸಿರುವ ‘ಲಿಟಲ್ ಚಾಂಪಿಯನ್’ ಅವರು ಆಟದ ಬಗ್ಗೆ ಯೋಚನೆ ಮಾಡುತ್ತಿದ್ದರೂ, ಅವರ ಮನಸ್ಸು ಮಾತ್ರ ಬಾಬಾಗಾಗಿ ಮಿಡಿಯುತ್ತಿದೆ.

ಎಂಬತ್ತೈದು ವರ್ಷ ವಯಸ್ಸಿನ ಬಾಬಾ ಅವರ ಆರೋಗ್ಯ ಕ್ಷೀಣಿಸುತ್ತಿರುವುದು ತೆಂಡೂಲ್ಕರ್ ಆತಂಕಗೊಳ್ಳುವಂತೆ ಮಾಡಿದೆ. ಆದ್ದರಿಂದಲೇ ಅವರು ತಮ್ಮ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ತಾವು ನಂಬಿರುವ ‘ದೇವ ಮಾನವ’ ಗುಣವಾದರೆ ಅದೇ ದೊಡ್ಡ ಸಂತಸದ ಕ್ಷಣ ಎನ್ನುವುದು ಸಚಿನ್ ಭಾವನೆ.

‘ನಾನು ಶ್ರೀ ಸತ್ಯ ಸಾಯಿಬಾಬಾ ಅವರು ಬೇಗ ಚೇತರಿಸಿಕೊಳ್ಳಲೆಂದು ನಿತ್ಯ ಪ್ರಾರ್ಥನೆ ಮಾಡುತ್ತಿದ್ದೇನೆ. ಬಾಬಾ ಮತ್ತೆ ಹಿಂದಿನ ಆರೋಗ್ಯವಂತರಾಗಲೆಂದು ನನ್ನ ಜೊತೆಗೆ ಎಲ್ಲರೂ ಸೇರಿ ಪ್ರಾರ್ಥಿಸಲೆಂದು ಆಶಿಸುತ್ತೇನೆ’ ಎಂದು ಅವರು ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಮೂಲಗಳು ಸಚಿನ್ ಅವರು ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನವೆಂದು ತಿಳಿಸಿವೆ. ಜನ್ಮದಿನವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿರುವ ಅನುಭವಿ ಬ್ಯಾಟ್ಸ್‌ಮನ್ ಪುಟ್ಟಪರ್ತಿ ಕಡೆಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎಂದು ಕೂಡ ಎಚ್‌ಸಿಎ ಅಧಿಕಾರಿಗಳು ಹೇಳಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ಆಡಳಿತವು ಈ ಕುರಿತು ಸ್ಪಷ್ಟವಾದ ಹೇಳಿಕೆಯನ್ನು ಶನಿವಾರ ರಾತ್ರಿಯವರೆಗೂ ನೀಡಲಿಲ್ಲ.

‘ಸಚಿನ್ ಭಾನುವಾರದ ಪಂದ್ಯದಲ್ಲಿ ಆಡುವುದಂತೂ ಅನುಮಾನ. ಅಗತ್ಯ ಎನಿಸಿದರೆ ಅವರು ತುರ್ತಾಗಿ ಪುಟ್ಟರ್ತಿಗೆ ಹೋಗಬಹುದು’ ಎಂದಿರುವ ಅಧಿಕಾರಿಗಳು ‘ಸಚಿನ್ ಜನ್ಮದಿನದಂದು ಅವರು ಉಳಿದುಕೊಳ್ಳುವ ಹೋಟೆಲ್‌ನಲ್ಲಿ ದೊಡ್ಡದೊಂದು ಔತಣಕೂಟ ಆಯೋಜಿಸಲು ಎಚ್‌ಸಿಎ ಹಾಗೂ ಮುಂಬೈ ಇಂಡಿಯನ್ಸ್ ಆಡಳಿತ ಯೋಚಿಸಿತ್ತು. ಆದರೆ ಅದಕ್ಕೆ ಒಪ್ಪಿಗೆಯನ್ನು ಕ್ರಿಕೆಟಿಗ ನೀಡಿಲ್ಲ’ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.

ಅಂಗವಿಕಲ ಸೈನಿಕರೊಂದಿಗೆ ಸಚಿನ್ (ಪುಣೆ ವರದಿ): ‘ಮಾಸ್ಟರ್ ಬ್ಲಾಸ್ಟರ್’ ತಮ್ಮ ಹುಟ್ಟುಹಬ್ಬದ ಮುನ್ನಾದಿನವನ್ನು ಅಂಗವಿಕಲರಾಗಿರುವ ಸೈನಿಕರೊಂದಿಗೆ ಕಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಜೀವನದಲ್ಲಿ ಕೊನೆಯವರೆಗೆ ಹೋರಾಟವನ್ನು ನಿಲ್ಲಿಸದೇ ಮುನ್ನುಗ್ಗುವ ಛಲ ನನ್ನಲ್ಲಿ ಬಂದಿದ್ದೇ ನಿಮ್ಮಂಥ ಯೋಧರಿಂದ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.