ADVERTISEMENT

ಹೆಚ್ಚಿದ ವಿಶ್ವಾಸ; ಜಯದ ನಿರೀಕ್ಷೆಯಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ಅಡಿಲೇಡ್:ಶ್ರೀಲಂಕಾ ವಿರುದ್ಧದ ಗೆಲುವು ವಿಶ್ವಾಸ ಹೆಚ್ಚಲು ಕಾರಣ. ಆದರೆ ಆಸ್ಟ್ರೇಲಿಯಾ ಎದುರು ಜಯ ಸಿಕ್ಕಿಲ್ಲ ಎನ್ನುವ ಬೇಸರ. ಆದರೂ ಮೆಲ್ಬರ್ನ್‌ನಲ್ಲಿ ಸಾಧ್ಯವಾಗದ್ದನ್ನು ಅಡಿಲೇಡ್‌ನಲ್ಲಿ ಸಾಧಿಸುವ ಆಸೆಯಂತೂ ಬಲವಾಗಿದೆ.

ತ್ರಿಕೋನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ 65 ರನ್‌ಗಳ ಅಂತರದಿಂದ ನಿರಾಸೆಗೊಂಡಿದ್ದ ಪ್ರವಾಸಿಗಳು ಶ್ರೀಲಂಕಾ ಎದುರು ನಾಲ್ಕು ವಿಕೆಟ್‌ಗಳ ಗೆಲುವಿನಿಂದ ಚೇತರಿಸಿಕೊಂಡರು. ಸಿಂಹಳೀಯರ ಎದುರು ಜಯಿಸಿದರೂ ತೃಪ್ತಿಯಂತೂ ಇಲ್ಲ. ಈ ಸರಣಿಯಲ್ಲಿ ಇಮ್ಮಡಿ ಸಂತಸ ಸಿಗುವುದು ಕಾಂಗರೂಗಳ ಎದುರು ಗೆದ್ದರೆ ಮಾತ್ರ.
 
ಲೀಗ್ ಪಾಯಿಂಟುಗಳ ಪಟ್ಟಿನಲ್ಲಿ ಮೊದಲ ಎರಡರಲ್ಲಿ ಒಂದು ಸ್ಥಾನವನ್ನು ಖಾತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿಯೂ ಆಸೀಸ್ ವಿರುದ್ಧ ಪಡೆಯುವ ಒಂದು ಜಯಕ್ಕೆ ಮಹತ್ವ.ಶ್ರೀಲಂಕಾ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಆದರೆ ಭಾರತಕ್ಕೆ ಒಂದು ಗೆಲುವಿನಿಂದ ಸಿಕ್ಕ ನಾಲ್ಕು ಪಾಯಿಂಟುಗಳ ಬಲವಿದೆ.

ಆಸ್ಟ್ರೇಲಿಯಾ ಪಾಯಿಂಟುಗಳನ್ನು ಗಿಟ್ಟಿಸುವಲ್ಲಿ ಎತ್ತರದಲ್ಲಿದ್ದು, ಮುಂದೆಯೂ ಅದು ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಒತ್ತಡ ಇರುವುದು ಭಾರತದ ಮೇಲೆ. ಶ್ರೀಲಂಕಾ ನಿಕಟ ಪೈಪೋಟಿ ನೀಡದಂತೆ ಸುಸ್ಥಿತಿ ತಲುಪಲು ಆಸ್ಟ್ರೇಲಿಯಾ ಎದುರು ಸಿಗುವ ಒಂದೆರಡು ಗೆಲುವಿಗೆ ಮಹತ್ವ.
ಆದ್ದರಿಂದಲೇ ಭಾನುವಾರ ಇಲ್ಲಿನ ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಸರಣಿಯ ನಾಲ್ಕನೇ ಪಂದ್ಯವು ಮಹತ್ವದ್ದಾಗಿದೆ.

ಟೆಸ್ಟ್‌ನಲ್ಲಿ ಸೋಲಿನ ಸರಪಣಿಯ ಕೊಂಡಿ ಕಳಚಿಕೊಳ್ಳದ ಭಾರತವು ಚುಟುಕು ಕ್ರಿಕೆಟ್ ಸರಣಿಯಲ್ಲಿ ಮಾತ್ರ ಒಂದು ಪಂದ್ಯ ಗೆದ್ದು ಸಮಾಧಾನ ಪಟ್ಟಿದೆ. ತ್ರಿಕೋನ ಸರಣಿಯಲ್ಲಿ ಇನ್ನೂ ಆಸ್ಟ್ರೇಲಿಯಾ ಎದುರು ಗೆಲುವಿನ ಖಾತೆ ತೆರೆಯುವುದು ಬಾಕಿ. ಶ್ರೀಲಂಕಾ ವಿರುದ್ಧದ ವಿಜಯದಿಂದ ಹೆಚ್ಚಿರುವ ವಿಶ್ವಾಸವನ್ನು ಮೈಕಲ್ ಕ್ಲಾರ್ಕ್ ನೇತೃತ್ವದ ತಂಡದ ಎದುರು ಆಡುವಾಗಲೂ ಕಾಯ್ದುಕೊಂಡರೆ ನಾಲ್ಕು ಪಾಯಿಂಟ್ಸ್ ಕೈಗೆಟುಕಬಹುದು. ಆಸೀಸ್ ಎದುರು ಬೋನಸ್ ಪಾಯಿಂಟ್ ನಿರೀಕ್ಷೆ ಮಾಡುವುದಂತೂ ಭಾರಿ ಕಷ್ಟ.

ಕಾಂಗರೂಗಳ ಗೆಲುವಿನ ಓಟಕ್ಕೆ ವಿರಾಮ ಹಾಕುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಆದರೆ ಚೆಂಡು ಪುಟಿದೇಳುವ ಅಂಗಳ ಎನ್ನುವ ಭಯದ ಗೂಡಿನಿಂದ ದೋನಿ ಪಡೆಯ     ಬ್ಯಾಟ್ಸ್‌ಮನ್‌ಗಳು ಇನ್ನೂ ಹೊರಬರುತ್ತಿಲ್ಲ. ಕ್ಲಾರ್ಕ್ ಬಳಗದ ಬೌಲರ್‌ಗಳ ಎದುರಂತೂ ಬುಡವೇ ಅಲುಗಾಡುವ ಕಟ್ಟಡದಂತೆ. ಬ್ಯಾಟಿಂಗ್ ಕೊರತೆಯನ್ನು ನೀಗಿಸಿಕೊಳ್ಳುವುದೊಂದೇ ಭಾರತದ ಮುಂದಿರುವ ಯಶಸ್ಸಿನ ಮಹಾಮಾರ್ಗ.

ದೊಡ್ಡ ಮೊತ್ತ ಕಲೆಹಾಕುವಂಥ ಜೊತೆಯಾಟಗಳು ಬೇಕು. ಲಂಕಾ ಎದುರು ಅಂಥ ಜೊತೆಯಾಟ ನೋಡಲು ಸಾಧ್ಯವಾಗಿತ್ತು. ಅದೇ ಸತ್ವಯುತ ಆಟವು ಇನ್ನಷ್ಟು ಶಕ್ತಿ ಪಡೆದರೆ ದೋನಿ ಬಯಸಿದಂಥ ಫಲಿತಾಂಶ ಹೊರಹೊಮ್ಮಬಹುದು.

ಈ ಪಂದ್ಯದಲ್ಲಿ ಭಾರತದ ಹನ್ನೊಂದರ ಪಟ್ಟಿಯು ಸ್ವಲ್ಪ ಬದಲಾವಣೆ ಕಾಣುವ ನಿರೀಕ್ಷೆಯಿದೆ. ಬೆರಳು ಸಂದಿನಲ್ಲಿ ಗಾಯವಾಗಿದ್ದರಿಂದ         ಪರ್ತ್‌ನಲ್ಲಿ ಆಡಿರದಿದ್ದ ರಾಹುಲ್ ಶರ್ಮ ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಇದೇ ಲೆಗ್ ಸ್ಪಿನ್ನರ್ ನೆರವು ಪಡೆಯಲು ನಾಯಕ ದೋನಿ ಯೋಚಿಸಿದರೆ ಅಚ್ಚರಿಯಿಲ್ಲ. ಶನಿವಾರ ನೆಟ್ಸ್‌ನಲ್ಲಿ ರಾಹುಲ್ ಯಾವುದೇ ತೊಂದರೆ ಇಲ್ಲದೆ ಬೌಲಿಂಗ್ ಮಾಡಿದರು. ಆ ಮೂಲಕ ತಾವು ಮತ್ತೆ ಅಂಗಳದಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗಿರುವುದಾಗಿ ಸಾರಿದ್ದಾರೆ. ಆದರೂ ಒಂದು ವೇಳೆ `ಮ್ಯಾಚ್ ಫಿಟ್~ ಆಗಿಲ್ಲ ಎಂದು ಅನಿಸಿದರೆ ಮತ್ತೆ ಸ್ಪಿನ್ ದಾಳಿಗೆ ಬಲ ನೀಡುವ ಜವಾಬ್ದಾರಿ ಹೊತ್ತುಕೊಳ್ಳುವುದು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್.

ಸರದಿ ಪ್ರಕಾರ ವಿಶ್ರಾಂತಿ ಎನ್ನುವ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಚಿನ್ ತೆಂಡೂಲ್ಕರ್‌ಗೆ ಒಂದು ಪಂದ್ಯದ ಮಟ್ಟಿಗೆ ವಿರಾಮ. ಆದರೆ ಅವರನ್ನು ಆಡಿಸಬೇಕು ಎನ್ನುವ ತೀರ್ಮಾನಕ್ಕೆ ಬಂದರೆ ಗೌತಮ್ ಗಂಭೀರ್ ಇಲ್ಲವೆ ವೀರೇಂದ್ರ ಸೆಹ್ವಾಗ್‌ಗೆ ವಿಶ್ರಾಂತಿ.

ಈ ಬಗ್ಗೆ ಭಾರತ ತಂಡದ ಆಡಳಿತವು ಪಂದ್ಯದ ದಿನವೇ ಸ್ಪಷ್ಟ ನಿರ್ಧಾರಕ್ಕೆ ಬರಲಿದೆ. ಕಳೆದ ಪಂದ್ಯದಲ್ಲಿ 48 ರನ್ ಗಳಿಸಿ ತಂಡಕ್ಕೆ ಒಂದಿಷ್ಟು ಆಸರೆಯಾದ ಸಚಿನ್ ಆಡುವುದೇ ಸೂಕ್ತ. ಗಂಭೀರ್ ಮತ್ತು ಸೆಹ್ವಾಗ್ ತಾವಾಡಿದ ತಲಾ ಒಂದು ಪಂದ್ಯದಲ್ಲಿ ತಂಡಕ್ಕೆ ಮಹತ್ವದ ಕೊಡುಗೆಯನ್ನೇನು ನೀಡಿಲ್ಲ.
ತಂಡಗಳು
 ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಡೇನಿಯಲ್ ಕ್ರಿಸ್ಟಿಯನ್, ಕ್ಸೇವಿಯರ್ ಡೊಹರ್ಟಿ, ಪೀಟರ್ ಫಾರೆಸ್ಟ್, ರ‌್ಯಾನ್ ಹ್ಯಾರಿಸ್, ಡೇವಿಡ್ ಹಸ್ಸಿ, ಮಿಷೆಲ್ ಮಾರ್ಷ್, ಕ್ಲಿಂಟ್ ಮೆಕೇ, ರಿಕಿ ಪಾಂಟಿಂಗ್, ಮಿಷೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್ ಮತ್ತು ಡೇವಿಡ್ ವಾರ್ನರ್.

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಹೀರ್ ಖಾನ್, ಪ್ರವೀಣ್ ಕುಮಾರ್, ವಿನಯ್ ಕುಮಾರ್, ರಾಹುಲ್ ಶರ್ಮ ಮತ್ತು ಇರ್ಫಾನ್ ಪಠಾಣ್.
ಅಂಪೈರ್‌ಗಳು: ನೈಜಿಲ್ ಲಾಂಗ್ (ಇಂಗ್ಲೆಂಡ್) ಮತ್ತು ಪಾಲ್ ರೀಪೆಲ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ಬ್ರೂಸ್ ಆಕ್ಸೆನ್‌ಫೋರ್ಡ್ (ಆಸ್ಟ್ರೇಲಿಯಾ).
ಪಂದ್ಯ ಆರಂಭ (ಭಾರತೀಯ ಕಾಲಮಾನ): ಬೆಳಿಗ್ಗೆ 8.50ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.