ADVERTISEMENT

‘ಹೊನಲು ಬೆಳಕಿನಲ್ಲಿ ಟೆಸ್ಟ್ ಆಡುವುದೇ ಇಲ್ಲ’

ಪಿಟಿಐ
Published 7 ಮೇ 2018, 19:30 IST
Last Updated 7 ಮೇ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ಹೊನಲು ಬೆಳಕಿನಲ್ಲಿ ಟೆಸ್ಟ್ ಕ್ರಿಕೆಟ್ ಆಡಲು ಭಾರತ ತಂಡ ಸಿದ್ಧವಿಲ್ಲ ಎಂಬುದನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟ್ ಆಸ್ಟ್ರೇಲಿಯಾಗೆ ಸೋಮವಾರ ಅಧಿಕೃತವಾಗಿ ತಿಳಿಸಿದೆ.

ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯವನ್ನು ಹೊನಲು ಬೆಳಕಿನಲ್ಲಿ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿತ್ತು.

‘ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟು ಪಿಂಕ್‌ ಬಾಲ್‌ನಲ್ಲಿ ಪಂದ್ಯ ಆಡಲು ಭಾರತ ತಂಡ ಇಷ್ಟಪಡುವುದಿಲ್ಲ’ ಎಂಬ ಸಂದೇಶವನ್ನು ಬಿಸಿಸಿಐ ರವಾನಿಸಿದೆ.

ADVERTISEMENT

’ಸರಣಿಯನ್ನು ಪಿಂಕ್‌ ಬಾಲ್ ಟೆಸ್ಟ್‌ ಮೂಲಕ ಆರಂಭಿಸಲು ನಮಗೆ ಇಷ್ಟವಿಲ್ಲ ಎಂಬುದನ್ನು ತಿಳಿಸುವಂತೆ ಆಡಳಿತಾಧಿಕಾರಿಗಳ ಸಮಿತಿ ನನಗೆ ಸೂಚಿಸಿದೆ’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ರಾಹುಲ್ ಚೌಧರಿ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಸದರ್ಲೆಂಡ್ ಅವರಿಗೆ ಕಳುಹಿಸಿರುವ ಇಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೋಚ್ ರವಿಶಾಸ್ತ್ರಿ ನೇತೃತ್ವದ ಆಡಳಿತ ಮಂಡಳಿ ‘ಹಗಲು ರಾತ್ರಿ ಪಂದ್ಯಕ್ಕೆ ಸಜ್ಜಾಗಲು ಭಾರತ ತಂಡಕ್ಕೆ ಕನಿಷ್ಠ 18 ತಿಂಗಳು ಬೇಕು’ ಎಂದು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಗೆ ತಿಳಿಸಿದೆ.‌

ಹಗಲು ರಾತ್ರಿ ಟೆಸ್ಟ್ ಪಂದ್ಯ ಆಡಿಸಲು ಶತಾಯಗತಾಯ ಪ್ರಯತ್ನಿಸುತ್ತಿರುವ ಸದರ್ಲೆಂಡ್‌, ‘ಭಾರತ ಸೋಲಿನ ಭಯದಿಂದಾಗಿ ಇದಕ್ಕೆ ಒಪ್ಪುತ್ತಿಲ್ಲ’ ಎಂದು ದೂರಿದ್ದರು. ಆಸ್ಟ್ರೇಲಿಯಾ ತಂಡ ತವರಿನಲ್ಲಿ ಹೊನಲು ಬೆಳಕಿನಲ್ಲಿ ನಡೆದ ಯಾವುದೇ ಟೆಸ್ಟ್ ಪಂದ್ಯವನ್ನು ಸೋತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.