ADVERTISEMENT

ಹೊಸ ವಿವಾದದಲ್ಲಿ ಕ್ರಿಕೆಟ್ ಮಂಡಳಿ

ಈಡನ್ ಗಾರ್ಡನ್ಸ್ ಕ್ಯುರೇಟರ್ ಕಡೆಗಣನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2012, 19:42 IST
Last Updated 28 ನವೆಂಬರ್ 2012, 19:42 IST
ಹೊಸ ವಿವಾದದಲ್ಲಿ ಕ್ರಿಕೆಟ್ ಮಂಡಳಿ
ಹೊಸ ವಿವಾದದಲ್ಲಿ ಕ್ರಿಕೆಟ್ ಮಂಡಳಿ   

ಕೋಲ್ಕತ್ತ (ಪಿಟಿಐ): ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯ ನಡೆಯಲಿರುವ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಸಿದ್ಧಪಡಿಸುವ ವಿಚಾರದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೈಗೊಂಡ ನಿಲುವು ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಹಿರಿಯ ಕ್ಯುರೇಟರ್ ಪ್ರಬೀರ್ ಮುಖರ್ಜಿ ಅವರ ಬದಲು ಪೂರ್ವ ವಲಯದ ಕ್ಯುರೇಟರ್ ಆಶೀಶ್ ಭೌಮಿಕ್ ಅವರಲ್ಲಿ ಈಡನ್ ಪಿಚ್ ಸಿದ್ಧಪಡಿಸಲು ಬಿಸಿಸಿಐ ಸೂಚಿಸಿದೆ. ಮಾತ್ರವಲ್ಲ ಪಿಚ್ ಸಿದ್ಧಪಡಿಸಲು ಆಶೀಶ್ ಅವರನ್ನು ನೇಮಿಸುವಂತೆ ಮಂಡಳಿಯು ಬಂಗಾಳ ಕ್ರಿಕೆಟ್ ಸಂಸ್ಥೆಗೆ (ಸಿಎಬಿ) ತಿಳಿಸಿದೆ.

ಕಳೆದ ಕೆಲ ವರ್ಷಗಳಿಂದ ಈಡನ್ ಪಿಚ್‌ನ್ನು ನೋಡಿಕೊಳ್ಳುತ್ತಿರುವ ಪ್ರಬೀರ್ ಅವರನ್ನು ಕಡೆಗಣಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತ್ರಿಪುರ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಭೌಮಿಕ್ ಬಿಸಿಸಿಐ ಸೂಚನೆಯಂತೆ ಬುಧವಾರ ಕೋಲ್ಕತ್ತಕ್ಕೆ ಆಗಮಿಸಿದರು. ಮೂರನೇ ಟೆಸ್ಟ್ ಡಿಸೆಂಬರ್ 5 ರಿಂದ ಆರಂಭವಾಗಲಿದೆ.

ADVERTISEMENT

ಈಡನ್ ಪಿಚ್ ಕ್ಯುರೇಟರ್ ಪ್ರಬೀರ್ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ನಡುವೆ ಭಿನ್ನಾಭಿಪ್ರಾಯ ಇರುವುದರಿಂದ ಬಿಸಿಸಿಐ ಈ ಹೆಜ್ಜೆಯಿಟ್ಟಿದೆ ಎನ್ನಲಾಗಿದೆ. ಮೂರನೇ ಟೆಸ್ಟ್‌ಗೆ ಸಿದ್ಧಪಡಿಸುವ ಪಿಚ್ ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವು ನೀಡಬೇಕು ಎಂದು ದೋನಿ ಹೇಳಿದ್ದರು. ಆದರೆ ಪ್ರಬೀರ್ ಇದಕ್ಕೆ ಒಪ್ಪಿಲ್ಲ.

`ಬಿಸಿಸಿಐ ನಿರ್ದೇಶನದಂತೆ ಭೌಮಿಕ್ ಕೋಲ್ಕತ್ತಕ್ಕೆ ತೆರಳುತ್ತಿದ್ದಾರೆ. ಸ್ಥಳೀಯ ಕ್ಯುರೇಟರ್ (ಪ್ರಬೀರ್) ಸ್ಥಾನವನ್ನು ಅವರು ತುಂಬಲಿದ್ದಾರೆಯೇ ಎಂಬುದು ತಿಳಿದಿಲ್ಲ. ಈ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ' ಎಂದು ತ್ರಿಪುರ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅರಿಂದಮ್ ಗಂಗೂಲಿ ಹೇಳಿದ್ದಾರೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಬಿ ಜಂಟಿ ಕಾರ್ಯದರ್ಶಿ ಸುಜನ್ ಮುಖರ್ಜಿ, `ಪ್ರತಿ ಪಂದ್ಯಕ್ಕೆ ಮುನ್ನ ಪಿಚ್ ಪರಿಶೀಲಿಸಲು ಕ್ಯುರೇಟರ್‌ಗಳು ಆಗಮಿಸುವುದು ವಾಡಿಕೆ. ಇದರಲ್ಲಿ ಯಾವುದೇ ವಿಶೇಷ ಇಲ್ಲ. ಪ್ರಬೀರ್ ಈಡನ್‌ನ ಕ್ಯುರೇಟರ್ ಆಗಿ ಮುಂದುವರಿಯಲಿದ್ದಾರೆ. ಅವರನ್ನು ಬದಲಿಸಿಲ್ಲ' ಎಂದಿದ್ದಾರೆ.

ಭೌಮಿಕ್ ಅವರನ್ನು ಕೋಲ್ಕತ್ತಕ್ಕೆ ಕಳುಹಿಸುವ ನಿರ್ಧಾರವನ್ನು ಬಿಸಿಸಿಐ ಪಿಚ್ ಮತ್ತು ಕ್ರೀಡಾಂಗಣ ಸಮಿತಿ ಕೈಗೊಂಡಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ ಮತ್ತು ಐಪಿಎಲ್ ಮುಖ್ಯಸ್ಥರೂ ಆಗಿರುವ ರಾಜೀವ್ ಶುಕ್ಲಾ ತಿಳಿಸಿದ್ದಾರೆ. `ಎಲ್ಲ ಕ್ಯುರೇಟರ್‌ಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸುವರು. ದೋನಿ ಸೂಚನೆಯಂತೆ ಬಿಸಿಸಿಐ ಈ ಹೆಜ್ಜೆಯಿಟ್ಟಿದೆ ಎಂಬ ಸುದ್ದಿ ಸುಳ್ಳು. ಮಂಡಳಿಯ ಪಿಚ್ ಮತ್ತು ಕ್ರೀಡಾಂಗಣ ಸಮಿತಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ' ಎಂದು ನುಡಿದಿದ್ದಾರೆ.

83ರ ಹರೆಯದ ಪ್ರಬೀರ್ ಈ ಹಿಂದೆಯೂ ಹಲವು ಸಲ ದೋನಿ ಅವರ ಅಭಿಪ್ರಾಯವನ್ನು ಟೀಕಿಸಿದ್ದರು. `ಸ್ಪಿನ್‌ಗೆ ನೆರವು ನೀಡುವ ಪಿಚ್ ಬೇಕು ಎಂದು ಭಾರತ ತಂಡದ ನಾಯಕ ಬಹಿರಂಗ ಹೇಳಿಕೆ ನೀಡಿದ್ದು ದುರದೃಷ್ಟಕರ. ಸ್ಪಿನ್ ಪಿಚ್ ಸಿದ್ಧಪಡಿಸಬೇಕೆಂದರೆ ಬಿಸಿಸಿಐನಿಂದ ಲಿಖಿತ ರೂಪದ ನಿರ್ದೇಶನ ಬೇಕು' ಎಂದು ಅವರು ತಿಳಿಸಿದ್ದರು.

ಕಡೆಗಣಿಸಿದ್ದು ಹೌದು: ಪ್ರಬೀರ್
ಕೋಲ್ಕತ್ತ (ಐಎಎನ್‌ಎಸ್): ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಪಿಚ್ ಸಿದ್ಧಪಡಿಸುವ ವಿಚಾರದಲ್ಲಿ ಬಿಸಿಸಿಐ ನನ್ನನ್ನು ಕಡೆಗಣಿಸಿದ್ದು ಹೌದು ಎಂದು ಪ್ರಬೀರ್ ಮುಖರ್ಜಿ ಹೇಳಿದ್ದಾರೆ.

`ಬಿಸಿಸಿಐ ಸೂಚನೆಯಂತೆ ಆಶೀಶ್ ಭೌಮಿಕ್ ಪಿಚ್ ಹಾಗೂ ಅಂಗಳದ ಉಸ್ತುವಾರಿ ವಹಿಸಿಕೊಂಡಿದ್ದು, ನನಗೆ ಹೆಚ್ಚಿನ ಅಧಿಕಾರ ನೀಡಿಲ್ಲ' ಎಂದಿದ್ದಾರೆ. `ಅವರು (ಭೌಮಿಕ್) ಈಗ ನನ್ನ ಬಾಸ್. ನಾನು ಏನಿದ್ದರೂ ಅವರ ಸೂಚನೆಯಂತೆ ಕೆಲಸ ನಿರ್ವಹಿಸಬೇಕಿದೆ' ಎಂದು ಪ್ರಬೀರ್ ನಿರಾಸೆಯಿಂದಲೇ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.